ಈ ಬಾರಿ ಭರ್ಜರಿ ಮತಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪಾತ್ರವೂ ಬಹಳ ಮಹತ್ವದ್ದಾಗಿದೆ. ಹೀಗಾಗಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಇದೇ ತಂತ್ರಗಾರಿಕೆ ಮಾಡಲು ಹೊರಟಿದ್ದಾರೆ.
ಕರ್ನಾಟಕದಂತೆ ತೆಲಂಗಾಣದಲ್ಲೂ ಪಕ್ಷ ಅಧಿಕಾರಕ್ಕೆ ತರುವುದಕ್ಕೆ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿಯೇ ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಸಮಯ ನೀಡಲು ಹಾಗೂ ಅಲ್ಲಿನ ಕಾಂಗ್ರೆಸ್ ಘಟಕಕ್ಕೆ ಹೆಚ್ಚಿನ ಸಮಯ ನೀಡಲು ಸೂಚಿಸಲಾಗಿದೆ. ಡಿಕೆಶಿ ಅವರ ಸಂಘಟನಾ ಕೌಶಲ್ಯದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಂಬಿಕೆ ಇಟ್ಟಿದೆ.
ಇನ್ನು ನಾಲ್ಕು ತಿಂಗಳ ಒಳಗಾಗಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಭಾರತ್ ರಾಷ್ಟ್ರ ಸಮಿತಿ ಪಕ್ಷ ಅಧಿಕಾರದಲ್ಲಿದ್ದು, ಕೆಸಿಆರ್ ಎಂದೇ ಕರೆಯಲ್ಪಡುವ ಹಾಲಿ ಸಿಎಂ ಕೆ. ಚಂದ್ರಶೇಖರ ರಾವ್ ಅವರ ಸರ್ಕಾರವು ಪ್ರಾರಂಭಿಸಿದ ಕಲ್ಯಾಣ ಯೋಜನೆಗಳು ಅವರನ್ನು ಉತ್ತಮ ಸ್ಥಾನದಲ್ಲಿ ಇರಿಸಿವೆ. ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶ, ವೃದ್ಧಾಪ್ಯ ವೇತನ, ನೀರಾವರಿ ಯೋಜನೆಗಳು, ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು, ಮದುವೆಯಾದ ದಂಪತಿಗಳಿಗೆ ಆರ್ಥಿಕ ನೆರವು ಇತ್ಯಾದಿ ಯೋಜನೆಗಳು ಕೆಸಿಆರ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸವಾಲುಗಳನ್ನು ಹಿಮ್ಮೆಟ್ಟಿಸಲು ಅವರಿಗೆ ಸಹಾಯ ಮಾಡಿದೆ. ಹೀಗಾಗಿ ಈ ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಯೋಚಿಸಲಾಗಿದೆ. ಅದರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದೆ.