ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಆ.04): ನಗರದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರು ಅಸ್ವಸ್ಥರಾದ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಶುಕ್ರವಾರದಂದು ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು.
ಕವಾಡಿಗರ ಹಟ್ಟಿ ಗ್ರಾಮದಲ್ಲಿ ನೀರು ಸೇವನೆಯಿಂದ ಸಾರ್ವಜನಿಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ಅವರ ಮಾರ್ಗದರ್ಶನದಂತೆ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಧ್ವನಿವರ್ಧಕದ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು.
ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವುದರಿಂದ, ವಾಂತಿಭೇದಿ ಪ್ರಕರಣಗಳು ಹರಡದಂತೆ ತಡೆಗಟ್ಟಬಹುದಾಗಿದ್ದು, ಊಟ ಮಾಡುವ ಮುನ್ನ, ಶೌಚಾಲಯ ಬಳಕೆ ಮಾಡಿದ ನಂತರ, ಸೋಪಿನಿಂದ ಕೈ-ಕಾಲುಗಳನ್ನು ಚೆನ್ನಾಗಿ ಉಜ್ಜಿ ತೊಳೆದುಕೊಳ್ಳಬೇಕು, ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಮಾತ್ರ ಸೇವನೆ ಮಾಡಬೇಕು, ತಂಗಳು ತಡಿಗಳನ್ನ ತಿನ್ನಬಾರದು. ಹಣ್ಣು ತರಕಾರಿಗಳನ್ನ ಉಪ್ಪು ನೀರಿನಿಂದ ತೊಳೆದು ಉಪಯೋಗಿಸಬೇಕು, ಆಹಾರ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ ಮುಚ್ಚಿಟ್ಟು ಬಳಸಬೇಕು, ಕಾಯಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು.
ಎಲ್ಲೆಂದರಲ್ಲಿ ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದೆ ಶೌಚಾಲಯಗಳನ್ನೇ ಬಳಸಬೇಕು. ಶೌಚಾಲಯಗಳ ಸ್ವಚ್ಛತೆ, ಪರಿಸರ ಸ್ವಚ್ಛತೆ, ವಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಕಾಯಿಸಿ, ಆರಿಸಿದ ಶುದ್ಧ ನೀರನ್ನ ಕುಡಿಯಬೇಕು. ಯಾರಿಗಾದರೂ ವಾಂತಿಭೇದಿ ಆದಲ್ಲಿ ಕವಾಡಿಗರ ಹಟ್ಟಿ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯವನ್ನು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ತೆರೆಯಲಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು.
ಯಾರೂ ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ವಾಂತಿಭೇದಿ ಪ್ರಕರಣಗಳು ಬಾರದಂತೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹಾಗೂ ಸಿಬ್ಬಂದಿ ಲಿಂಗೇಶ್ ಅವರ ಮೂಲಕ ಧ್ವನಿವರ್ಧಕದಲ್ಲಿ ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ.