Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾರ್ಚ್ 04 ರಂದು ಫಲಾನುಭವಿಗಳ ಸಮಾವೇಶ, ಚಿತ್ರದುರ್ಗಕ್ಕೆ ಮುಖ್ಯಮಂತ್ರಿ ಆಗಮನ : ಪೂರ್ವ ಸಿದ್ಧತಾ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯಿತು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

---Advertisement---

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ಮಾ.01): ಮುಖ್ಯಮಂತ್ರಿಗಳು ಮಾ. 04 ರಂದು ಚಿತ್ರದುರ್ಗಕ್ಕೆ ಆಗಮಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸೂಕ್ತ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಫಲಾನುಭವಿಗಳನ್ನು ಸುರಕ್ಷತೆಯಿಂದ ಕರೆತಂದು ವಾಪಸ್ ಕರೆದುಕೊಂಡು ಹೋಗುವವರೆಗಿನ ಎಲ್ಲ ವ್ಯವಸ್ಥೆಯೂ ಸಮರ್ಪಕವಾಗಿರುವಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿ. ರಾಮ್‍ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫಲಾನುಭವಿಗಳ ಸಮಾವೇಶ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಲಕ್ಷಾಂತರ ಜನರು ವಿವಿಧ ಸವಲತ್ತುಗಳನ್ನು ಪಡೆದು ಫಲಾನುಭವಿಗಳಾಗಿದ್ದಾರೆ.  ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹೀಗೆ ಎಲ್ಲ ವರ್ಗಗಳ ಜನರು ಸರ್ಕಾರದ ವಿವಿಧ ಯೋಜನೆಗಳಡಿ ಒಂದಲ್ಲ ಒಂದು ಸೌಲಭ್ಯ ಪಡೆದುಕೊಂಡಿದ್ದಾರೆ.  ಎಲ್ಲ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಆಯೋಜನೆಗೆ ಸರ್ಕಾರ ಸೂಚನೆ ನೀಡಿದ್ದು, ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮವೇ ಮೊದಲ ಸಮಾವೇಶವಾಗಿದೆ.

ಮುಖ್ಯಮಂತ್ರಿಗಳೇ ಖುದ್ದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ, ಸಮಾವೇಶ ಯಶಸ್ವಿಗೊಳಿಸಲು ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರಿಯಾಶೀಲರಾಗಿ ಕೆಲಸ ಮಾಡಬೇಕು.  ಕೃಷಿ, ಆರೋಗ್ಯ, ಶಿಕ್ಷಣ, ಸಹಕಾರ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ತೋಟಗಾರಿಕೆ, ಸ್ಲಂ ಬೋರ್ಡ್ ಸೇರಿದಂತೆ ವಿವಿಧ ಇಲಾಖೆಗಳಿಂದ ಕನಿಷ್ಟ 75 ಸಾವಿರದಿಂದ 01 ಲಕ್ಷದವರೆಗೆ ಫಲಾನುಭವಿಗಳನ್ನು ಸಮಾವೇಶಕ್ಕೆ ಸೇರಿಸಲು ಆಯಾ ಇಲಾಖಾ ಅಧಿಕಾರಿಗಳು ಕ್ರಮ ವಹಿಸಬೇಕು.

ಆಯಾ ಇಲಾಖೆ ಅಧಿಕಾರಿಗಳು ಸಮಾವೇಶಕ್ಕೆ ಕರೆತರಲು ವಾಹನದ ವ್ಯವಸ್ಥೆ, ಮಾರ್ಗ, ಪ್ರತಿ 25 ರಿಂದ 30 ಫಲಾನುಭವಿಗಳಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನಿಯೋಜಿಸಿ, ಫಲಾನುಭವಿಗಳನ್ನು ಸಮಾವೇಶದ ಸ್ಥಳಕ್ಕೆ ಕರೆತಂದು, ವಾಪಸ್ ಸುರಕ್ಷಿತವಾಗಿ ಹಿಂದಿರುಗುವವರೆಗಿನ ಯೋಜನೆಯನ್ನು ರೂಪಿಸಿಕೊಳ್ಳಬೇಕು.

ಫಲಾನುಭವಿಗಳ ವಿವರ, ವಾಹನದ ವಿವರ, ಮಾರ್ಗ, ಮೇಲ್ವಿಚಾರಕರ ನಿಯೋಜನೆ ಕುರಿತ ಸಮಗ್ರ ವಿವರವನ್ನು ಒಂದು ದಿನದ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಮುಖವಾಗಿ ಊಟ, ಕುಡಿಯುವ ನೀರು ಹಾಗೂ ವಾಹನದ ವ್ಯವಸ್ಥೆ ಯೋಜಿತ ರೀತಿಯಲ್ಲಿ ಆಗಬೇಕು,  ಇದರಲ್ಲಿ ಯಾವುದೇ ಗೊಂದಲ ಇರಬಾರದು.  ಫಲಾನುಭವಿಗಳಿಗೆ ಇಲಾಖಾವಾರು ಪ್ರತ್ಯೇಕವಾಗಿ ಬ್ಯಾಡ್ಜಸ್ ರೂಪಿಸಿ ವಿತರಿಸಬೇಕು ಎಂದರು.

ಸಮಾವೇಶ ಆವರಣದಲ್ಲಿ ಫಲಾನುಭವಿಗಳಿಗೆ ನೂಕುನುಗ್ಗಲು ಆಗದ ರೀತಿ ಊಟದ ಸಮರ್ಪಕ ವಿತರಣೆಗೆ ಹೆಚ್ಚಿನ ಕೌಂಟರ್‍ಗಳು ಇರಬೇಕು.  ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಕೇಂದ್ರಗಳು ಇರಬೇಕು.  ಊಟ, ನೀರಿನ ವಿತರಣೆಗೂ ಮುನ್ನ ಆಹಾರ ಗುಣಮಟ್ಟ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಡೆಸಿ, ದೃಢೀಕರಿಸಬೆಕು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ, ಪೊಲೀಸ್ ಇಲಾಖೆಯು ಭದ್ರತಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು, ಹಾಗೂ ಸಾವಿರಾರು ವಾಹನಗಳು ಬರುವುದರಿಂದ ಪಾರ್ಕಿಂಗ್‍ಗೆ ಸೂಕ್ತ ಸ್ಥಳಾವಕಾಶ ಮಾಡಿಕೊಂಡು, ಮಾರ್ಗಗಳ ನಿಯಂತ್ರಣ ವ್ಯವಸ್ಥೆ ಮಾಡಿಕೊಳ್ಳಬೇಕು.

ವೇದಿಕೆಯಲ್ಲಿ ನಿಯಮಾನುಸಾರ ಶಿಷ್ಟಾಚಾರದ ಪಾಲನೆ ಆಗಬೇಕು, ಗಣ್ಯರನ್ನು ಸ್ವಾಗತಿಸುವುದು, ಗೌರವಿಸುವ ಕಾರ್ಯ ಅಚ್ಚುಕಟ್ಟಾಗಿ ಆಗಬೇಕು.  ಸಮಾವೇಶಕ್ಕೆ ಶಾಲಾ ಕಾಲೇಜು ಮಕ್ಕಳನ್ನು ಕೂಡ ಕರೆತರಲಾಗುವುದರಿಂದ, ಮಕ್ಕಳ ಸುರಕ್ಷತೆ ಬಹುಮುಖ್ಯ ವಿಷಯವಾಗಿದ್ದು, ಈ ಬಗ್ಗೆ ಡಿಡಿಪಿಐ ಅವರು ಹೆಚ್ಚಿನ ಗಮನ ನೀಡಬೇಕು.
ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ವೈವಿಧ್ಯಮಯ ಕಲಾತಂಡಗಳನ್ನು ಕರೆಸಿ, ಸಮಾರಂಭವನ್ನು ಹೆಚ್ಚು ಆಕರ್ಷಿತವಾಗಿಸಬೇಕು.  ಸಮಾವೇಶ ಕುರಿತಂತೆ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...