Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ನ.28.29 ರಂದು ಸಮಾಜಮುಖಿ ನುಡಿ ಹಬ್ಬ – ಸಾಹಿತ್ಯ ಸಮ್ಮೇಳನ : ಯೋಗೀಶ್ ಸಹ್ಯಾದ್ರಿ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 27 : ಸಮಾಜಮುಖಿ ಪ್ರಕಾಶನವು 2026ನೇ ಸಾಲಿನ ಸಮಾಜಮುಖಿ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 28 ಮತ್ತು 29ರ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಿದೆ. ಈ ಬಾರಿಯ ಸಮ್ಮೇಳನದಲ್ಲಿ ಒಟ್ಟು ನಾಲ್ಕು ವೇದಿಕೆಗಳಿದ್ದು, 42 ಗೋಷ್ಠಿಗಳು ನಡೆಯಲಿವೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಹೇಳಿದರು.

ಸಮಾಜಮುಖಿ ಓದುಗರ ಬಳಗದಿಂದ ಹಮ್ಮಿಕೊಂಡಿದ್ದ ಸಭೆ ಹಾಗೂ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿ,
ಸಮ್ಮೇಳನದ ನಾಲ್ಕು ವೇದಿಕೆಗಳಿಗೆ ಬಹುವಚನ ವೇದಿಕೆ, ಸಂಸ್ಕೃತಿ ಸಂಪದ ವೇದಿಕೆ, ಸೃಜನಶೀಲ ವೇದಿಕೆ ಮತ್ತು ಶಾಸ್ತ್ರೀಯ ವೇದಿಕೆ ಎಂದು ಹೆಸರಿಸಲಾಗಿದ್ದು, ಎರಡು ದಿನಗಳ ಗೋಷ್ಠಿಗಳು ಕನ್ನಡ ಸಾಹಿತ್ಯ, ಭಾಷೆ ಮತ್ತು ಸಮಾಜವನ್ನು ಹಲವು ಆಯಾಮಗಳಿಂದ ಶೋಧಿಸಲಿವೆ. ಬಹುವಚನ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿ, ಕನ್ನಡಪರ ಹೋರಾಟದ ಇಂದಿನ ಸ್ಥಿತಿ, ಕನ್ನಡದಲ್ಲಿ ಸಂಶೋಧನೆಯ ದಾರಿಗಳು, ಜೆನ್ ಝೀ ತಲೆಮಾರಿನ ತಲ್ಲಣಗಳು ಮತ್ತು ಭರವಸೆಗಳು, ಕೃತಕ ಬುದ್ಧಿಮತ್ತೆಯ ಸೃಜನಶೀಲ ಸಾಧ್ಯತೆಗಳು, ಭಕ್ತಿ ಮತ್ತು ಅನುಭಾವ, ಭಾಷೆಗಳೊಡನೆ ಬದುಕು ಹಾಗೂ ಕನ್ನಡ ಅಭಿಜಾತ ಪಠ್ಯಗಳ ಕುರಿತ ಇಂಗ್ಲಿಷ್ ಸಂವಾದಗಳು ನಡೆಯಲಿವೆ ಎಂದರು.

ಸಂಸ್ಕೃತಿ ಸಂಪದ ವೇದಿಕೆಯು ನೃತ್ಯ, ರಂಗವಿನ್ಯಾಸ, ರಂಗಸಂಗೀತ, ಚಿತ್ರಕಲೆ, ಅನುವಾದ ಸಾಹಿತ್ಯ, ಪಶ್ಚಿಮ ಘಟ್ಟಗಳ ಪರಿಸರ ರಾಜಕೀಯ, ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿರುವ ಕೃತಕ ಬುದ್ಧಿಮತ್ತೆ, ಸಮಕಾಲೀನ ಕಾದಂಬರಿಯೊಂದರ ಕುರಿತ ಸಂವಾದ ಮತ್ತು ಮಕ್ಕಳು ಕನ್ನಡ ಸಾಹಿತ್ಯವನ್ನು ಏಕೆ ಓದುತ್ತಿಲ್ಲ ಎಂಬ ಪ್ರಶ್ನೆಗಳಿಗೆ ವೇದಿಕೆಯಾಗಲಿದ್ದು, ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನದ ಅಂಗವಾಗಿ ವಿಶೇಷ ನಮನ ಗೋಷ್ಠಿಯೂ ಇಲ್ಲಿ ನಡೆಯಲಿದೆ ಎಂದರು.

ಸಾಹಿತಿ, ಬರಹಗಾರ್ತಿ, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಮಾತನಾಡಿ, ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪನಾ, ಎಂ.ವೀರಪ್ಪಮೊಯಿಲಿ, ಆರ್.ಸುನಂದಮ್ಮ. ಎನ್.ಆರ್.ವಿಶುಕುಮಾರ್, ಬೈರಮಂಗಲ ರಾಮೇಗೌಡ ಅವರು ಭಾಗವಹಿಸುತ್ತಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಜಯಮ್ಮ, ಬಂಜಗೆರೆ ಜಯಪ್ರಕಾಶ್, ಕೆ.ವೈ.ನಾರಾಯಣಸ್ವಾಮಿ, ಹೆಚ್.ಆ‌ರ್.ಸುಜಾತ ಇವರು ಪಾಲ್ಗೊಳ್ಳುತ್ತಿದ್ದಾರೆ.

ವಿವಿಧ ಗೋಷ್ಠಿಗಳಲ್ಲಿ ಹೆಚ್.ಎಸ್.ಶಿವಪ್ರಕಾಶ್, ಓ.ಎಲ್.ನಾಗಭೂಷಣಸ್ವಾಮಿ, ಬಿ.ಜಯಶ್ರೀ, ಕರಿಯಪ್ಪ ಮಾಳಿಗೆ, ಬಂಜಗೆರೆ ಜಯಪ್ರಕಾಶ್, ತಾರಿಣಿ ಶುಭದಾಯಿನಿ, ಸುದೇಶ್ ಮಹಾನ್, ಶಶಿಧರ ಅಡಪ, ಅರವಿಂದ ಚೊಕ್ಕಾಡಿ, ಸುರೇಶ ಆನಗಳ್ಳಿ, ಬಿ.ಸುರೇಶ, ಜಿ.ಎನ್.ದೇವಿ, ಎಸ್.ಎನ್. ಶ್ರೀಧರ್, ಎಸ್.ಜಿ.ಸಿದ್ಧರಾಮಯ್ಯ, ಜಯಪ್ರಕಾಶಗೌಡ, ಕೃಪಾಕರ ಸೇನಾನಿ, ನಟರಾಜ ಹುಳಿಯಾರ್, ರಾಜೇಂದ್ರಚೆನ್ನಿ, ಚ.ಹ. ರಘುನಾಥ್, ಎಂ.ಎಸ್.ಆಶಾದೇವಿ, ಎಸ್.ನಟರಾಜ ಬೂದಾಳ್, ಎಸ್.ಆರ್. ವಿಜಯಶಂಕರ, ವಸುಂಧರ ಭೂಪತಿ, ವೈಜಯಂತಿಕಾಶಿ, ಹಿ.ಶಿ. ರಾಮಚಂದ್ರೇಗೌಡ, ಬಾ.ಹ. ರಮಾಕುಮಾರಿ, ತಮಿಳ್‌ಸೆಲ್ವಿ, ಬೈರಮಂಗಲ ರಾಮೇಗೌಡ, ಎನ್.ಆರ್.ಲಲಿತಾಂಬ, ಮೇಟಿ ಮಲ್ಲಿಕಾರ್ಜುನ, ಆರ್.ಪೂರ್ಣಿಮಾ, ಕಮಲಾಕರ ಭಟ್ಟ ಮುಂತಾದವರು ಭಾಗವಹಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ , ಕಸಾಪ ಗೌರವ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ಶಿಕ್ಷಕಿ ಬ್ಲೆಸ್ಸಿ ಏಂಜೆಲ್, ಶಿಕ್ಷಕ ನಾಗರಾಜ್ ಇತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now