Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏಷ್ಯಾ ಪವರ್ ಇಂಡೆಕ್ಸ್‌  : ರಷ್ಯಾ, ಜಪಾನ್ ಹಿಂದಿಕ್ಕಿ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

Asia Power Index: India emerges as the 3rd most powerful nation, surpassing Russia and Japan.
---Advertisement---

ನವದೆಹಲಿ :  ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಮತ್ತು ಶಕ್ತಿ ನಿರಂತರವಾಗಿ ಹೆಚ್ಚುತ್ತಿದ್ದು, ಇದಕ್ಕೆ ಈಗ ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳೂ ಮುದ್ರೆ ಒತ್ತಿವೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ ‘ಲೋವಿ ಇನ್‌ಸ್ಟಿಟ್ಯೂಟ್’ ಬಿಡುಗಡೆ ಮಾಡಿರುವ ‘ಏಷ್ಯಾ ಪವರ್ ಇಂಡೆಕ್ಸ್ 2026’ ರಲ್ಲಿ ಭಾರತವು ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ರಷ್ಯಾ ಮತ್ತು ಜಪಾನ್‌ನಂತಹ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿರುವ ಭಾರತವು ಮೂರನೇ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. 2026ರ ಸೂಚ್ಯಂಕದಲ್ಲಿ ಭಾರತದ ಪವರ್ ಸ್ಕೋರ್ ಸುಧಾರಿಸಿದ್ದು, 40.5ಕ್ಕೆ ಏರಿಕೆಯಾಗಿದೆ. ಪಟ್ಟಿಯಲ್ಲಿ 78.9 ಅಂಕಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 73.6 ಅಂಕಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ. ಆದರೆ, ಉಭಯ ದೇಶಗಳ ನಡುವಿನ ಅಂತರ ಕಡಿಮೆಯಾಗಿದ್ದು, ಚೀನಾ ಈಗ ಅಮೆರಿಕಕ್ಕೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಭಾರತದ ನಂತರದ ಸ್ಥಾನಗಳಲ್ಲಿ ಅಂದರೆ ನಾಲ್ಕನೇ ಸ್ಥಾನದಲ್ಲಿ ಜಪಾನ್ (38.6 ಅಂಕಗಳು), ಐದನೇ ಸ್ಥಾನದಲ್ಲಿ ರಷ್ಯಾ (32.2 ಅಂಕಗಳು) ಹಾಗೂ ಆರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (31.7 ಅಂಕಗಳು) ಸ್ಥಾನ ಪಡೆದಿವೆ.

ಎರಡನೇ ಅತ್ಯಂತ ಪ್ರಭಾವಶಾಲಿ ನಾಯಕನಾಗಿ ಪ್ರಧಾನಿ ಮೋದಿ

ಲೋವಿ ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಏಷ್ಯಾದ ಎರಡನೇ ಅತ್ಯಂತ ಪ್ರಭಾವಶಾಲಿ ಪ್ರಾದೇಶಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಭಾರತದ ರಾಜತಾಂತ್ರಿಕ ಪ್ರಭಾವ ಸ್ಥಿರವಾಗಿ ಮುಂದುವರಿದಿದೆ ಎಂದು ‘ಏಷ್ಯಾ ಪವರ್ ಇಂಡೆಕ್ಸ್ 2026’ ತಿಳಿಸಿದೆ. ತಜ್ಞರ ಅಭಿಪ್ರಾಯದಂತೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಂತರ ಮೋದಿ ಏಷ್ಯಾದ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ.

ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ

ವಿಶ್ವಬ್ಯಾಂಕ್ (World Bank), ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕ ಸಂಸ್ಥೆಗಳು ಈ ವರ್ಷ ಮತ್ತು ಮುಂದಿನ ವರ್ಷಕ್ಕೆ ಭಾರತದ ಆರ್ಥಿಕ ವೃದ್ಧಿ ದರದ ಅಂದಾಜನ್ನು ಶೇ. 7ಕ್ಕಿಂತ ಹೆಚ್ಚಿಗೆ ಪರಿಷ್ಕರಿಸಿವೆ. ಕೊರಿಯಾ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ ಪಾಲಿಸಿಯ (KIEP) ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಕ್ಯುಂಗ್‌ಹೂನ್ ಕಿಮ್ ಅವರ ಅಂದಾಜಿನ ಪ್ರಕಾರ, 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ.

ಲೋವಿ ಇನ್‌ಸ್ಟಿಟ್ಯೂಟ್‌ನ ‘ಏಷ್ಯಾ ಪವರ್ ಇಂಡೆಕ್ಸ್ 2026’ ಒಟ್ಟು 131 ಮಾನದಂಡಗಳ ಆಧಾರದ ಮೇಲೆ ಏಷ್ಯಾದ 27 ದೇಶಗಳು ಮತ್ತು ಪ್ರಾಂತ್ಯಗಳ ಶ್ರೇಯಾಂಕವನ್ನು ನಿರ್ಧರಿಸುತ್ತದೆ. ಏಷ್ಯಾ ಖಂಡದಲ್ಲಿ ಯಾವ ದೇಶವು ಎಷ್ಟು ಶಕ್ತಿ ಮತ್ತು ಪ್ರಭಾವವನ್ನು ಹೊಂದಿದೆ ಎಂಬುದನ್ನು ಮೌಲ್ಯಮಾಪನ ಮಾಡುವುದು ಈ ಸೂಚ್ಯಂಕದ ಮುಖ್ಯ ಉದ್ದೇಶವಾಗಿದೆ.

Join WhatsApp

Join Now

Join Telegram

Join Now