ಸುದ್ದಿಒನ್, ಚಿತ್ರದುರ್ಗ, ನವೆಂಬರ್. 14 : ಇಂದಿನಿಂದ (ನವೆಂಬರ್. 14 ರಿಂದ 20 ರವರೆಗೆ) ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಗುತ್ತದೆ. ಜನಸಾಮಾನ್ಯರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮತ್ತು ಗ್ರಂಥಾಲಯಗಳ ಮಹತ್ವವನ್ನು ಸಾರುವ ಈ ವಿಶೇಷ ಸಂದರ್ಭದಲ್ಲಿ, ಚಿತ್ರದುರ್ಗದಲ್ಲಿರುವ ಶತಮಾನದ ಇತಿಹಾಸ ಹೊಂದಿರುವ ‘ಶ್ರೀಕೃಷ್ಣರಾಜೇಂದ್ರ ನಗರ ಕೇಂದ್ರ ಗ್ರಂಥಾಲಯ’ದ ಹೆಜ್ಜೆಗುರುತುಗಳನ್ನು ಮೆಲುಕು ಹಾಕುವುದು ಅತ್ಯಂತ ಪ್ರಸ್ತುತವಾಗಿದೆ.

ಮುಖ್ಯ ಗ್ರಂಥಾಲಯ ಅಧಿಕಾರಿ ಬಸವರಾಜ್ ಕೊಳ್ಳಿ ಅವರು ನೀಡಿರುವ ಮಾಹಿತಿಯಂತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ರೂಪುಗೊಂಡ ಈ ಗ್ರಂಥಾಲಯ, ಇಂದು ಆಧುನಿಕ ಜ್ಞಾನದೇಗುಲವಾಗಿ ಬೆಳೆದು ನಿಂತಿರುವ ಬಗೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.

ರಾಜವೈಭವದ ತಂಗುದಾಣದಿಂದ ಅಕ್ಷರ ದೇಗುಲದವರೆಗಿನ ಐತಿಹಾಸಿಕ ಪಯಣ :
ಚಿತ್ರದುರ್ಗದ ನಗರ ಕೇಂದ್ರ ಗ್ರಂಥಾಲಯವು ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರುವ ಪುಸ್ತಕಗಳ ಜೋಡಣೆಯಲ್ಲ, ಬದಲಾಗಿ ಅದಕ್ಕೊಂದು ಭವ್ಯವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. 1925 ರಲ್ಲಿ ಮೈಸೂರು ಸಂಸ್ಥಾನದ ಅರಸರಿಗಾಗಿ ಪ್ರವಾಸಿ ತಂಗುದಾಣವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಆ ಕಾಲದಲ್ಲೇ ಗ್ರಂಥಾಲಯವಾಗಿ ಪರಿವರ್ತಿಸುವ ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆಯಲಾಗಿತ್ತು.
ಅಂದಿನ ಬ್ರಿಟಿಷ್ ಕಾಲದ ವಾಸ್ತುಶಿಲ್ಪವನ್ನು ಬಿಂಬಿಸುವ ಎಂಟು ಬಾಗಿಲುಗಳಿದ್ದ ಕೊಠಡಿಯನ್ನು ಇಂದಿಗೂ ಯಥಾವತ್ತಾಗಿ ಉಳಿಸಿಕೊಂಡು ಬರಲಾಗಿದ್ದು, ಪ್ರವೇಶಿಸುತ್ತಿದ್ದಂತೆಯೇ ಗತಕಾಲದ ವೈಭವ ಕಣ್ಮುಂದೆ ಬರುತ್ತದೆ. 1965ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕಾಯ್ದೆ ಜಾರಿಗೆ ಬಂದಾಗ ವಾಚನಾಲಯಗಳೆಲ್ಲವೂ ಅಧಿಕೃತವಾಗಿ ಗ್ರಂಥಾಲಯಗಳಾಗಿ ಬದಲಾದವು. ತದನಂತರ 2007ರಿಂದ ನಗರ ಕೇಂದ್ರ ಗ್ರಂಥಾಲಯವಾಗಿ ಮೇಲ್ದರ್ಜೆಗೇರಿತು. ಇಂದು ನಗರದಲ್ಲಿ ಒಟ್ಟು 10 ಶಾಖೆಗಳ ಮೂಲಕ ಈ ಅಕ್ಷರ ಪರಂಪರೆ ಯಶಸ್ವಿಯಾಗಿ ಮುಂದುವರೆಯುತ್ತಿದೆ.
ಚಿತ್ರದುರ್ಗ ನಗರದಲ್ಲಿರುವ ಗ್ರಂಥಾಲಯ ಕೇಂದ್ರಗಳು :
1. ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ ಶ್ರೀಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯ, ಮುಖ್ಯ ಶಾಖೆ, ತ.ರಾ.ಸು. ರಂಗ ಮಂದಿರ ಎದುರು, ಬಿ.ಡಿ.ರಸ್ತೆ, ಚಿತ್ರದುರ್ಗ.
2. ಸಮುದಾಯ ಮಕ್ಕಳ ಕೇಂದ್ರ, ಮುಖ್ಯ ಗ್ರಂಥಾಲಯದ ಆವರಣ,
3. ಶಾಖಾ ಗ್ರಂಥಾಲಯ ವೀರಸೌಧ ಶಾಖೆ, ವೀರಸೌಧ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ.
4. ಶಾಖಾ ಗ್ರಂಥಾಲಯ, ಕವಾಡಿಗರಹಟ್ಟಿ ಶಾಖೆ, ಚಿತ್ರದುರ್ಗ
5. ಶಾಖಾ ಗ್ರಂಥಾಲಯ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ, ಸರಸ್ವತಿ ಪುರಂ, ಚಿತ್ರದುರ್ಗ.
6. ಶಾಖಾ ಗ್ರಂಥಾಲಯ ಮುರುಘಾಮಠ ಶಾಖೆ, ಮಠದ ಕುರುಬರ ಹಟ್ಟಿ, ಚಿತ್ರದುರ್ಗ.
7. ಶಾಖಾ ಗ್ರಂಥಾಲಯ, ಧವಳಗಿರಿ ಬಡಾವಣೆ, ಚಿತ್ರದುರ್ಗ.
8. ಜಿಲ್ಲಾ ಕಾರಾಗೃಹ ಸೇವಾಕೇಂದ್ರ, ಹಳೇ ಬೆಂಗಳೂರು ರಸ್ತೆ, ಚಿತ್ರದುರ್ಗ.
9. ವಾಚನಾಲಯ ಪೊಲೀಸ್ ಕ್ವಾರ್ಟಸ್, ಸರ್ಕಾರಿ ಆಸ್ಪತ್ರೆ ಎದುರು, ಚಿತ್ರದುರ್ಗ.
10. ಐಯುಡಿಪಿ ಲೇಔಟ್ ವಾಚನಾಲಯ ಶಾಖೆ, ರಾಜ್ಕುಮಾರ್ ಪಾರ್ಕ್ ಬಳಿ, ಐಯುಡಿಪಿ ಲೇಔಟ್
ವಿದ್ಯಾರ್ಥಿಗಳ ಸ್ಫೂರ್ತಿತಾಣ ಮುಖ್ಯ ಗ್ರಂಥಾಲಯ :
ಈ ಗ್ರಂಥಾಲಯದ ಅತ್ಯಂತ ಆಕರ್ಷಕ ಅಂಶವೆಂದರೆ ಅದರ ಸುತ್ತಲಿನ ಸುಂದರವಾದ ಪರಿಸರ. ಉದ್ಯಾನವನದ ಜೊತೆಯಲ್ಲೇ ಗ್ರಂಥಾಲಯ ಇರುವ ಕಾರಣ ಇಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣ ನಿರ್ಮಾಣವಾಗಿದೆ. ಸುತ್ತಲೂ ಬೆಳೆದು ನಿಂತಿರುವ ಹಸಿರು ಗಿಡಮರಗಳ ಮಧ್ಯೆ ಕುಳಿತು ಪುಸ್ತಕ, ಪತ್ರಿಕೆಗಳನ್ನು ಓದುವುದು ಒಂದು ಅನನ್ಯ ಅನುಭವವನ್ನು ನೀಡುತ್ತದೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಾವಿರಾರು ವಿದ್ಯಾರ್ಥಿಗಳಿಗೆ ನಿಜವಾದ ತಪೋವನವಾಗಿದೆ.
ಗ್ರಂಥಾಲಯಯ ಒಳ ನೋಟ

ಗ್ರಾಮೀಣ ಭಾಗದಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಅಧ್ಯಯನದ ಹಸಿವನ್ನು ನೀಗಿಸಲು ಈ ಗ್ರಂಥಾಲಯವು ಬೆಳಿಗ್ಗೆ 8 ಗಂಟೆಯಿಂದ ತನ್ನ ಬಾಗಿಲು ತೆರೆಯುವುದು ಇದರ ವಿಶೇಷತೆಯಾಗಿದೆ. ರಾತ್ರಿ 8 ಗಂಟೆಯವರೆಗೂ ವಿದ್ಯಾರ್ಥಿಗಳು ಇಲ್ಲಿ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬಹುದು.
ಭಾಷೆಗಳ ಗಡಿ ಮೀರಿದ ಲಕ್ಷಾಂತರ ಪುಸ್ತಕಗಳ ಬೃಹತ್ ಭಂಡಾರ ಗ್ರಂಥಾಲಯದ ಹತ್ತು ಶಾಖೆಗಳಲ್ಲಿ ಒಟ್ಟಾರೆಯಾಗಿ 1,52,773 ಪುಸ್ತಕಗಳ ಬೃಹತ್ ಸಂಗ್ರಹವಿದೆ. ಕೇವಲ ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಭಾಷೆಗಳ ಶ್ರೇಷ್ಠ ಸಾಹಿತ್ಯ ಕೃತಿಗಳು ಓದುಗರಿಗೆ ಲಭ್ಯವಿವೆ. ಇದುವರೆಗೂ 13,029 ಜನ ನೋಂದಾಯಿತ ಸದಸ್ಯರನ್ನು ಹೊಂದಿರುವ ಈ ಗ್ರಂಥಾಲಯದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಖ್ಯ ಶಾಖೆಯೊಂದಕ್ಕೇ ಪ್ರತಿನಿತ್ಯ 300-500 ಓದುಗರು ಭೇಟಿ ನೀಡುತ್ತಾರೆ. ಸರಸ್ವತಿಪುರಂ ಶಾಖೆಯಲ್ಲಿ 150-200 ಜನ ಹಾಗೂ ದವಳಗಿರಿ ಶಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 50-100 ವಿದ್ಯಾರ್ಥಿಗಳು ನಿತ್ಯವೂ ಆಗಮಿಸಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಇದು ಕೇವಲ ಅಂಕಿ ಅಂಶಗಳಲ್ಲ, ಚಿತ್ರದುರ್ಗದ ಜನರ ಓದಿನ ಆಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಗ್ರಂಥಾಲಯದ ಹೊರ ನೋಟ

ಡಿಜಿಟಲ್ ಯುಗಕ್ಕೆ ತಕ್ಕಂತೆ ಹೊಸ ರೂಪ ಮತ್ತು ನೂತನ ಸೌಲಭ್ಯಗಳು :
ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಈ ಶತಮಾನದ ಗ್ರಂಥಾಲಯವು ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದೆ. ಓದುಗರ ಸಂಖ್ಯೆ ಮತ್ತು ಆಧುನಿಕ ಅಗತ್ಯತೆಗಳನ್ನು ಮನಗಂಡು ಹೊಸ ಯೋಜನೆಯೊಂದರ ಅಡಿಯಲ್ಲಿ 8 ಕೋಟಿ 22 ಲಕ್ಷ ರೂಪಾಯಿಗಳ ಬೃಹತ್ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಈ ಅನುದಾನದಡಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ. ಪ್ರತಿಯೊಂದು ಶಾಖೆಯಲ್ಲೂ ಕನಿಷ್ಠ 5 ಕಂಪ್ಯೂಟರ್ಗಳನ್ನು ಅಳವಡಿಸುವ ಮೂಲಕ ಇ-ಲೈಬ್ರರಿ ಅಥವಾ ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಉದ್ಯಾನವನಗಳಲ್ಲಿ ಕುಳಿತು ಓದಲು ಬಯಸುವವರಿಗಾಗಿ ವಿಶೇಷವಾದ ಬಯಲು ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದೇ ಪ್ರತ್ಯೇಕ ಅಧ್ಯಯನ ಕೇಂದ್ರ ಹಾಗೂ ಆಟದ ಸಾಮಾನುಗಳೊಂದಿಗೆ ಮಕ್ಕಳನ್ನು ಆಕರ್ಷಿಸಲು ಪ್ರತ್ಯೇಕ ಮಕ್ಕಳ ಗ್ರಂಥಾಲಯವನ್ನು ಸಹ ಸ್ಥಾಪಿಸಲಾಗುತ್ತಿದೆ. ಇವೆಲ್ಲವೂ ಗ್ರಂಥಾಲಯದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ.
ಜೈಲಿನ ಕಂಬಿಗಳ ಹಿಂದೆಯೂ ಬೆಳಕು ಚೆಲ್ಲಿದ ಅಕ್ಷರ ಜ್ಯೋತಿ
ಗ್ರಂಥಾಲಯದ ಸೇವೆಯು ಕೇವಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಸಾರ್ವಜನಿಕರಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿರುವ ಕಾರಾಗೃಹದ ಕೈದಿಗಳಿಗಾಗಿಯೂ ಪ್ರತ್ಯೇಕ ಶಾಖೆಯನ್ನು ತೆರೆಯುವ ಮೂಲಕ ಪರಿವರ್ತನೆಯ ಹಾದಿಯನ್ನು ಸುಗಮಗೊಳಿಸಲಾಗಿದೆ. ನಿತ್ಯ 50 ಹೆಚ್ಚು ಕೈದಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪೊಲೀಸ್ ವಸತಿಗೃಹ ಹಾಗೂ ರಾಜಕುಮಾರ್ ಪಾರ್ಕ್ನಲ್ಲಿರುವ ಶಾಖೆಗಳು ಸಹ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಅಧ್ಯಯನ ಮಾಡಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇತ್ತೀಚೆಗಷ್ಟೇ ಓರ್ವ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡಿರುವುದು ಗ್ರಂಥಾಲಯದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳಲ್ಲಿ ಓದುವ ಒಲವು ಮೂಡಿಸಲು ಪ್ರಬಂಧ, ಚಿತ್ರಕಲೆ, ಗಾಯನ ಮುಂತಾದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಲಾಗುತ್ತಿದೆ.
ಅತ್ಯಂತ ಕೈಗೆಟುಕುವ ದರದಲ್ಲಿ ಆಜೀವ ಸದಸ್ಯತ್ವದ ಸುವರ್ಣ ಅವಕಾಶ :
ಜ್ಞಾನವನ್ನು ಪಡೆಯಲು ಹಣ ಎಂದಿಗೂ ಅಡ್ಡಿಯಾಗಬಾರದು ಎಂಬ ಉದಾತ್ತ ಉದ್ದೇಶದಿಂದ ಇಲ್ಲಿ ಆಜೀವ ಸದಸ್ಯತ್ವದ ಶುಲ್ಕವನ್ನು ಅತ್ಯಂತ ಕಡಿಮೆ ನಿಗದಿಪಡಿಸಲಾಗಿದೆ. ಕೇವಲ 100 ರೂ. ಪಾವತಿಸಿ ಒಂದು ಪುಸ್ತಕ ಪಡೆಯುವ, 150 ರೂಪಾಯಿಗೆ ಎರಡು ಪುಸ್ತಕ ಹಾಗೂ 200 ರೂಪಾಯಿಗೆ ಮೂರು ಪುಸ್ತಕ ಪಡೆಯುವ ಆಜೀವ ಸದಸ್ಯತ್ವದ ಆಯ್ಕೆಗಳಿವೆ. ವಿಶೇಷವೆಂದರೆ ಈ ಶುಲ್ಕವು ಸಂಪೂರ್ಣವಾಗಿ ಮರುಪಾವತಿಗೆ ಅರ್ಹವಾಗಿರುತ್ತದೆ. ಗ್ರಂಥಾಲಯದ ಸದಸ್ಯತ್ವ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಮೂರು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಿದರೆ ಸಾಕು ಎಂದು ಅಧಿಕಾರಿ ಬಸವರಾಜ್ ತಿಳಿಸಿದ್ದಾರೆ.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಈ ಸುಂದರ ಸಂದರ್ಭದಲ್ಲಿ, ಚಿತ್ರದುರ್ಗದ ಶ್ರೀಕೃಷ್ಣರಾಜ ನಗರ ಕೇಂದ್ರ ಗ್ರಂಥಾಲಯವು ನೂರು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಮೊಬೈಲ್ ಮತ್ತು ಅಂತರ್ಜಾಲಗಳು ಎಷ್ಟೇ ಆವರಿಸಿಕೊಂಡರೂ, ಗ್ರಂಥಾಲಯದಲ್ಲಿ ಕುಳಿತು ಪುಸ್ತಕದ ಪುಟಗಳನ್ನು ತಿರುವಿಹಾಕುತ್ತಾ ಪಡೆಯುವ ಜ್ಞಾನ ಮತ್ತು ನೆಮ್ಮದಿಗೆ ಬೇರಾವುದೂ ಸಾಟಿಯಾಗಲಾರದು. ಶತಮಾನದ ಇತಿಹಾಸವಿರುವ ಈ ಸಂಸ್ಥೆಯು ಮುಂದೆಯೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ದಾರಿದೀಪವಾಗಿ ಬೆಳಗಲಿ ಎಂಬುದೇ ಈ ಸಪ್ತಾಹದ ಆಶಯವಾಗಿದೆ.













