Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಷನ್ ಕಾರ್ಡ್: ಕ್ಯೂಆರ್ ಕೋಡ್ ತೋರಿಸಿದರೆ ಮಾತ್ರ ಇನ್ಮುಂದೆ ಪಡಿತರ.. ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

---Advertisement---

ನವದೆಹಲಿ :  ಪ್ರಸ್ತುತ ದೇಶದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಸುಮಾರು 78.65 ಕೋಟಿ ಜನರಿಗೆ ಕೇಂದ್ರ ಸರ್ಕಾರ ಪಡಿತರ ಪೂರೈಸುತ್ತಿದೆ. ಬಡವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ದೇಶಾದ್ಯಂತ ಸುಮಾರು 5.51 ಲಕ್ಷ ಪಡಿತರ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿ 2026-2027ನೇ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ರೂ. 2,27,429 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2029ರವರೆಗೆ ಉಚಿತ ಪಡಿತರ ವಿತರಣೆಯನ್ನು ವಿಸ್ತರಿಸಲಾಗಿದೆ.

ಇಷ್ಟು ದೊಡ್ಡ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರವು ಈಗಾಗಲೇ ಆಧಾರ್ ದೃಢೀಕರಣ, ಇ-ಪಿಒಎಸ್ (ePoS) ಯಂತ್ರಗಳು ಮತ್ತು ‘ಒನ್ ನೇಷನ್ – ಒನ್ ರೇಷನ್ ಕಾರ್ಡ್’ನಂತಹ ಡಿಜಿಟಲ್ ವಿಧಾನಗಳನ್ನು ಜಾರಿಗೆ ತಂದಿದೆ. ಆದಾಗ್ಯೂ, ಪಡಿತರ ಅಕ್ರಮವನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕೇಂದ್ರವು ಈಗ ‘ಡಿಜಿಟಲ್ ವೋಚರ್’ (Digital Voucher) ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

2026ರ ಜನವರಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು PDS ವ್ಯವಸ್ಥೆಗೆ ಎನ್‌ಪಿಸಿಐ (NPCI) ನ ಇ-ರುಪಿ (e-RUPI) ವೇದಿಕೆಯನ್ನು ಸಂಯೋಜಿಸಲು ಕಾನ್ಸೆಪ್ಟ್ ನೋಟ್ ಬಿಡುಗಡೆ ಮಾಡಿದೆ. ಈ ಪ್ರಸ್ತಾವನೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅನ್ನು ವೋಚರ್ ವಿತರಣಾ ಬ್ಯಾಂಕ್ ಆಗಿ ಹಾಗೂ ಎನ್‌ಐಸಿ (NIC) ಅನ್ನು ತಾಂತ್ರಿಕ ಪಾಲುದಾರನಾಗಿ ಸೂಚಿಸಲಾಗಿದೆ.

ಡಿಜಿಟಲ್ ವೋಚರ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಇ-ರುಪಿ (e-RUPI) ಎಂಬುದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ನೀಡಲಾಗುವ ಡಿಜಿಟಲ್ ವೋಚರ್ ಆಗಿದೆ. ಉದಾಹರಣೆಗೆ, ನಿಮ್ಮ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ನಿಗದಿಯಾಗಿದ್ದರೆ, “10 ಕೆಜಿ ಅಕ್ಕಿ” ಎಂಬ ಡಿಜಿಟಲ್ ವೋಚರ್ ಸೃಷ್ಟಿಯಾಗುತ್ತದೆ. ಇದಕ್ಕೆ ಯಾವುದೇ ನಗದು ಮೌಲ್ಯ ಇರುವುದಿಲ್ಲ. ಅಂದರೆ, ಇದನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಹಣವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಇದನ್ನು ಕೇವಲ ಆ ನಿರ್ದಿಷ್ಟ ಆಹಾರ ಧಾನ್ಯ ಪಡೆಯಲು ಮಾತ್ರ ಬಳಸಬೇಕು.

ವಿತರಣಾ ಪ್ರಕ್ರಿಯೆ:

ಫಲಾನುಭವಿಗಳ ಅರ್ಹತಾ ಮಾಹಿತಿಯನ್ನು ಎಸ್‌ಬಿಐಗೆ ಕಳುಹಿಸಲಾಗುತ್ತದೆ. ಎಸ್‌ಬಿಐ, ಎನ್‌ಪಿಸಿಐ ಜೊತೆಗೂಡಿ ಫಲಾನುಭವಿಯ ಆಧಾರ್‌ಗೆ ಲಿಂಕ್ ಆದ ಪ್ರತ್ಯೇಕ ವೋಚರ್ ಸೃಷ್ಟಿಸುತ್ತದೆ.

ಈ ವೋಚರ್ ಫಲಾನುಭವಿಯ ಮೊಬೈಲ್‌ಗೆ ಎಸ್‌ಎಂಎಸ್ (SMS) ಅಥವಾ ಕ್ಯೂಆರ್ ಕೋಡ್ (QR Code) ರೂಪದಲ್ಲಿ ಬರುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರು ‘ಮೇರಾ ರೇಷನ್’ (Mera Ration) ಆ್ಯಪ್ ಮೂಲಕವೂ ಇದನ್ನು ಪಡೆಯಬಹುದು.

ಫಲಾನುಭವಿಗಳು ಪಡಿತರ ಅಂಗಡಿಗೆ ಹೋಗಿ ತಮ್ಮ ಮೊಬೈಲ್‌ನಲ್ಲಿರುವ ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಅನ್ನು ಡೀಲರ್‌ಗೆ ತೋರಿಸಬೇಕು.

ಡೀಲರ್ ತಮ್ಮ ಇ-ಪಿಒಎಸ್ (ePoS) ಯಂತ್ರದ ಮೂಲಕ ಅದನ್ನು ಸ್ಕ್ಯಾನ್ ಮಾಡುತ್ತಾರೆ ಅಥವಾ ವೋಚರ್ ಐಡಿಯನ್ನು ನಮೂದಿಸುತ್ತಾರೆ.

ಭದ್ರತೆ ಮತ್ತು ಪಾರದರ್ಶಕತೆ:

ಆಧಾರ್ ಆಧಾರಿತ ಒಟಿಪಿ (OTP) ಅಥವಾ ಬಯೋಮೆಟ್ರಿಕ್ ಮೂಲಕ ದೃಢೀಕರಣ ಪೂರ್ಣಗೊಂಡ ನಂತರವಷ್ಟೇ ಫಲಾನುಭವಿಗೆ ಪಡಿತರ ನೀಡಲಾಗುತ್ತದೆ. ವಿತರಣೆ ಮುಗಿದ ನಂತರ ವಹಿವಾಟು ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಬಳಿಕ ಎಸ್‌ಬಿಐ, ಬ್ಯಾಂಕ್‌ಗಳು ಮತ್ತು ಸಂಬಂಧಿತ ವ್ಯವಸ್ಥೆಗಳ ನಡುವೆ ಸೆಟಲ್‌ಮೆಂಟ್ ನಡೆಯಲಿದ್ದು, ಡೀಲರ್ ಕಮಿಷನ್ ಕೂಡ ವ್ಯವಸ್ಥೆಯಲ್ಲಿ ನಮೂದಾಗುತ್ತದೆ.

ಈ ವೋಚರ್ ಅನ್ನು ಎಟಿಎಂನಿಂದ ನಗದಾಗಿ ಪಡೆಯಲು ಅಥವಾ ಬೇರೆಯವರಿಗೆ ನೀಡಲು ಬರುವುದಿಲ್ಲ. ಅರ್ಹ ಫಲಾನುಭವಿ ಖುದ್ದಾಗಿ ಇದನ್ನು ರಿಡೀಮ್ (ಬಳಕೆ) ಮಾಡಿಕೊಳ್ಳಬೇಕಾಗುತ್ತದೆ. ಈ ಹೊಸ ತಂತ್ರಜ್ಞಾನದಿಂದಾಗಿ ಪಡಿತರ ವಿತರಣೆಯಲ್ಲಿನ ಸೋರಿಕೆ ಸಂಪೂರ್ಣವಾಗಿ ನಿಲ್ಲಲಿದೆ ಎಂದು ನಿರೀಕ್ಷಿಸಲಾಗಿದೆ.

Join WhatsApp

Join Now

Join Telegram

Join Now