ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರ ಬದುಕಿನ ಪಯಣ ಸುಲಭದ್ದಾಗಿರಲಿಲ್ಲ. ಎಂಟು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ನೋವು, ಸಾಕು ತಾಯಿಯ ಪ್ರೀತಿಯ ಆರೈಕೆ, ಬಡತನ, ಬಾಲ್ಯದಲ್ಲೇ ಮದುವೆ, ವೈವಾಹಿಕ ಜೀವನದಲ್ಲಿ ಎದುರಾದ ಸವಾಲುಗಳು… ಹೀಗೆ ಬದುಕಿನ ಪ್ರತಿ ಹಂತದಲ್ಲೂ ಹಲವು ಏಳುಬೀಳುಗಳನ್ನು ಕಂಡವರು ಅವರು. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ರಂಗಭೂಮಿ, ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಉಮಾಶ್ರೀ ತಮ್ಮ ಬದುಕಿನ ಹಲವು ಮರೆಯಲಾಗದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಬಾಲ್ಯ, ಪ್ರೀತಿ, ಮದುವೆ, ನಟನೆಯ ಆರಂಭ, ರಂಗಭೂಮಿಯ ಅನುಭವಗಳು, ರಾಜಕೀಯ ಪ್ರವೇಶ ಸೇರಿದಂತೆ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.ಎಂಟು ತಿಂಗಳ ಮಗುವಾಗಿದ್ದಾಗಲೇ ತಾಯಿಯ ಅಗಲಿಕೆ
ಉಮಾಶ್ರೀ ಅವರ ಬದುಕಿನ ಹೋರಾಟ ಬಾಲ್ಯದಿಂದಲೇ ಆರಂಭವಾಗಿತ್ತು. ಕೇವಲ ಎಂಟು ತಿಂಗಳ ಮಗುವಾಗಿದ್ದಾಗಲೇ ಅವರು ತಾಯಿಯನ್ನು ಕಳೆದುಕೊಂಡರು. ಬಳಿಕ ಮಕ್ಕಳಿಲ್ಲದ ಸಾಕು ತಾಯಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಬೆಳೆಸಿದರು. ಸುಮಾರು 15ರಿಂದ 16 ವರ್ಷಗಳವರೆಗೆ ಸಾಕು ತಾಯಿಯ ಆರೈಕೆಯಲ್ಲಿ ಬೆಳೆದರು.
ಓದಿನಲ್ಲಿ ಹೆಚ್ಚು ಆಸಕ್ತಿ ಇರದ ಕಾರಣ ಪಿಯುಸಿ ಹಂತದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಮದುವೆಯಾದರು. ಸಾಕು ತಾಯಿ ತಮ್ಮನ್ನು ಅಪಾರ ಪ್ರೀತಿಯಿಂದ ಬೆಳೆಸಿದ್ದರೂ, ಅವರ ಕನಸಿನಂತೆ ಬದುಕಲು ಸಾಧ್ಯವಾಗಲಿಲ್ಲ ಎಂಬ ನೋವು ಇಂದಿಗೂ ಕಾಡುತ್ತದೆ ಎಂದು ಉಮಾಶ್ರೀ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
16-17ನೇ ವಯಸ್ಸಿನಲ್ಲೇ ಪ್ರೀತಿ, ಮದುವೆ
ಹದಿಹರೆಯದಲ್ಲಿಯೇ ಪ್ರೀತಿಯಲ್ಲಿ ಬಿದ್ದ ಉಮಾಶ್ರೀ, ಮನೆಯವರ ವಿರೋಧದ ನಡುವೆಯೂ ತಾವು ಇಷ್ಟಪಟ್ಟ ವ್ಯಕ್ತಿಯನ್ನೇ ವಿವಾಹವಾದರು. ಆದರೆ ಮದುವೆಯ ನಂತರ ಪತಿಯ ಕೆಲವು ಗುಣಗಳು ಮತ್ತು ಅಭ್ಯಾಸಗಳು ತಮ್ಮ ಅರಿವಿಗೆ ಬಂದವು ಎಂದು ಅವರು ತಿಳಿಸಿದ್ದಾರೆ.
“ಹುಡುಗರು ಹುಡುಗಿಯರನ್ನು ಬಹಳ ಚೆನ್ನಾಗಿ ನಂಬಿಸುತ್ತಾರೆ” ಎಂದು ತಮ್ಮ ಅನುಭವವನ್ನು ಹಾಸ್ಯಭರಿತವಾಗಿ ಹಂಚಿಕೊಂಡಿದ್ದಾರೆ. ಸಂಬಂಧದಲ್ಲಿ ನಂಬಿಕೆ ಕಳೆದುಕೊಂಡ ಬಳಿಕ ಮತ್ತೆ ಹಿಂದಿರುಗಿ ನೋಡುವುದಿಲ್ಲ ಎಂಬ ತಮ್ಮ ಸ್ವಭಾವದ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಯಾರೊಂದಿಗಾದರೂ ಆತ್ಮೀಯತೆ ಕಡಿಮೆಯಾದರೂ ಅವರನ್ನು ಗೌರವಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಉಮಾಶ್ರೀ ಅವರ ಬದುಕಿಗೆ ಹೊಸ ತಿರುವು ನೀಡಿದ್ದು ರಂಗಭೂಮಿ. ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳ ಬಳಿಕ ಮಕ್ಕಳ ಜವಾಬ್ದಾರಿಯೊಂದಿಗೆ ತವರು ಮನೆಗೆ ಮರಳಿದ ಅವರು, ಜೀವನ ನಿರ್ವಹಣೆಗಾಗಿ ಹೊಸ ದಾರಿಯನ್ನು ಹುಡುಕಬೇಕಾಯಿತು. ಇದೇ ಸಂದರ್ಭದಲ್ಲಿ ಹಳೆಯ ಸ್ನೇಹಿತೆ ಪುಷ್ಪ ಅವರನ್ನು ಭೇಟಿಯಾದರು. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪ, ಉಮಾಶ್ರೀ ಅವರಿಗೂ ನಾಟಕಗಳಲ್ಲಿ ಅಭಿನಯಿಸುವಂತೆ ಆಹ್ವಾನ ನೀಡಿದರು.ಹೀಗೆ ನಾಟಕದ ಮೂಲಕ ವೃತ್ತಿಜೀವನ ಆರಂಭಿಸಿದ ಉಮಾಶ್ರೀ ಅವರಿಗೆ ಆರಂಭದಲ್ಲಿ ಒಂದು ಗಂಟೆಯ ನಾಟಕದಲ್ಲಿ ಅಭಿನಯಿಸಿದ್ದಕ್ಕೆ 50 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಆ ಕಾಲದಲ್ಲಿ ಆ 50 ರೂಪಾಯಿ ಕೂಡ ಅವರಿಗೆ ದೊಡ್ಡ ಮೊತ್ತವಾಗಿತ್ತು. ನಂತರ ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ರುಕ್ಮಿಣಿ, ಉತ್ತರೆಯಂತಹ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆ ಗಳಿಸಿದರು.
ತಮ್ಮ ಅಭಿನಯ ಪ್ರತಿಭೆ, ಪಾತ್ರಗಳ ಮೇಲಿನ ಬದ್ಧತೆ ಮತ್ತು ಪರಿಶ್ರಮದಿಂದ ರಂಗಭೂಮಿಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ಒಂದು ಹಂತದಲ್ಲಿ 19 ನಾಟಕಗಳ ಪೈಕಿ 17 ನಾಟಕಗಳಿಗೆ ತಮ್ಮನ್ನೇ ಆಯ್ಕೆ ಮಾಡಲಾಗುತ್ತಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.ರಂಗಭೂಮಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಮತ್ತು ಅವಮಾನಗಳನ್ನು ಎದುರಿಸಬೇಕಾಯಿತು. ಕೆಲವರು ಮನಬಂದಂತೆ ಮಾತನಾಡುತ್ತಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೆಲಸದ ಕಡೆಗೆ ಮಾತ್ರ ಗಮನ ಹರಿಸುತ್ತಿದ್ದೆ ಎಂದು ಉಮಾಶ್ರೀ ಹೇಳಿದ್ದಾರೆ. “ನನಗೆ ಬೇಕಾಗಿರೋದು ಕೆಲಸ, ನನಗೆ ಬೇಕಾಗಿರೋದು ದುಡ್ಡು ಅಷ್ಟೇ” ಎಂಬ ಅವರ ಮಾತು ಬದುಕಿನ ಬಗ್ಗೆ ಅವರಿಗಿದ್ದ ಸ್ಪಷ್ಟ ನಿಲುವನ್ನು ಪ್ರತಿಬಿಂಬಿಸುತ್ತದೆ.
ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಉಮಾಶ್ರೀ ಅವರ ಬದುಕಿನಲ್ಲಿ ರಾಜಕೀಯವೂ ಮಹತ್ವದ ಅಧ್ಯಾಯವಾಯಿತು. ಶಾಸಕಿಯಾಗಿ, ಸಚಿವೆಯಾಗಿ ಸೇವೆ ಸಲ್ಲಿಸಿದ ಅವರು ಬಳಿಕ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಯನ್ನೂ ಅಲಂಕರಿಸಿದರು.
ಆದರೆ ರಾಜಕೀಯಕ್ಕೆ ಪ್ರವೇಶಿಸಬೇಕು ಅಥವಾ ಇಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂಬ ಕನಸನ್ನು ತಾವು ಎಂದಿಗೂ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬದುಕು ಯಾವ ದಿಕ್ಕಿನಲ್ಲಿ ಕರೆದೊಯ್ಯುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಎಂಬುದು ಅವರ ಅನುಭವದ ಮಾತು.
“ನಮ್ಮ ಬದುಕಿನ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದೆ. ನಾವು ಅದರ ಪಾತ್ರಧಾರಿಗಳು ಅಷ್ಟೇ” ಎಂಬ ಅವರ ಮಾತು ಗಮನ ಸೆಳೆಯುತ್ತದೆ. ಜೀವನದಲ್ಲಿ ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಎದುರಾದ ಸಂದರ್ಭಗಳನ್ನು ಸ್ವೀಕರಿಸಿ ಮುನ್ನಡೆಯಬೇಕು. ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ದಾರಿ ತೆರೆದುಕೊಳ್ಳುತ್ತದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.ಕಷ್ಟಗಳು ಎದುರಾದಾಗ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನೂ ನೀಡಿದ್ದಾರೆ.
ಬಾಲ್ಯದಲ್ಲಿನ ನೋವು, ವೈವಾಹಿಕ ಬದುಕಿನ ಸವಾಲುಗಳು, ಆರ್ಥಿಕ ಸಂಕಷ್ಟಗಳು ಹೀಗೆ ಹಲವು ಕಠಿಣ ಹಂತಗಳನ್ನು ದಾಟಿ ರಂಗಭೂಮಿಯಲ್ಲಿ ನೆಲೆ ಕಂಡುಕೊಂಡು, ಚಿತ್ರರಂಗದಲ್ಲಿ ಹೆಸರು ಮಾಡಿ ರಾಜಕೀಯದಲ್ಲೂ ಉನ್ನತ ಸ್ಥಾನಕ್ಕೇರಿದ ಉಮಾಶ್ರೀ ಅವರ ಬದುಕು ಹೋರಾಟ, ಆತ್ಮವಿಶ್ವಾಸ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.











