Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರಿನ ₹244 ಕೋಟಿ ಕೆರೆ ತುಂಬಿಸುವ ಯೋಜನೆಗೆ ನಾಳೆ ಸಿಎಂ ಚಾಲನೆ : ಸಚಿವ ಡಾ. ಅಜಯ್ ಧರ್ಮಸಿಂಗ್

---Advertisement---

 

*  16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ
*   0.307 ಟಿಎಂಸಿ ನೀರು ಬಳಸಿ ಜವನಗೊಂಡನಹಳ್ಳಿ ಹೋಬಳಿಯ ಜಲಮೂಲಗಳ ಪುನಶ್ಚೇತನ

ಬೆಂಗಳೂರು/ಚಿತ್ರದುರ್ಗ, ನವೆಂಬರ್. 02: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಮತ್ತು ಅಂತರ್ಜಲ ಅಭಿವೃದ್ಧಿಪಡಿಸುವ ₹244 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 3ರಂದು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

ಹಿರಿಯೂರು ತಾಲೂಕಿನ ದಿಂಡಾವರ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ 12.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಸಚಿವರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜವನಗೊಂಡನಹಳ್ಳಿ ಹೋಬಳಿಯಲ್ಲಿ ನಿರಂತರ ಬರ ಪರಿಸ್ಥಿತಿ, ಕೆರೆಗಳಲ್ಲಿ ನೀರಿನ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಈ ಭಾಗದಲ್ಲಿ ಅಂತರ್ಜಲಕ್ಕಾಗಿ ಸುಮಾರು 1,000 ಅಡಿ ಆಳದವರೆಗೆ ಕೊಳವೆಬಾವಿ ಕೊರೆಯಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ, ದೀರ್ಘಕಾಲಿಕ ಜಲಭದ್ರತೆ ಕಲ್ಪಿಸುವ ಉದ್ದೇಶದಿಂದ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಯಡಿ 0.307 ಟಿಎಂಸಿ ನೀರನ್ನು ಬಳಸಿ ಒಟ್ಟು 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸಲಾಗುತ್ತದೆ. ಇದರಲ್ಲಿ ಸಣ್ಣ ನೀರಾವರಿ ಇಲಾಖೆಯ 10 ಕೆರೆಗಳು ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 6 ಕೆರೆಗಳು ಸೇರಿವೆ.

ವೇದಾವತಿ ನದಿಗೆ ಅಡ್ಡಲಾಗಿ Submersible Diversion Weir ನಿರ್ಮಿಸಿ, ಜಾಕ್‌ವೆಲ್ ಮತ್ತು ಪಂಪ್‌ಹೌಸ್ ಮೂಲಕ ನೀರನ್ನು ಎತ್ತಿ ಕೆರೆಗಳಿಗೆ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯೋಜನೆಯಡಿ 2000 HP ಸಾಮರ್ಥ್ಯದ VT ಪಂಪುಗಳು, ಸುಮಾರು 28.13 ಕಿ.ಮೀ. MS ಪೈಪ್‌ಲೈನ್ ಹಾಗೂ 16.82 ಕಿ.ಮೀ. HDPE ಪೈಪ್‌ಲೈನ್ ನಿರ್ಮಿಸಲಾಗುತ್ತದೆ.

“ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳನ್ನು ತುಂಬಿಸಿ ಅಂತರ್ಜಲವನ್ನು ಪುನಶ್ಚೇತನಗೊಳಿಸುವುದು ನಮ್ಮ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ₹244 ಕೋಟಿ ಯೋಜನೆಗೆ ಚಾಲನೆ ದೊರೆಯುತ್ತಿರುವುದು ಹಿರಿಯೂರು ಭಾಗದ ಜನರಿಗೆ ಮಹತ್ವದ ಹೆಜ್ಜೆಯಾಗಿದೆ. ಕೆರೆಗಳು ತುಂಬುವುದರಿಂದ ಕುಡಿಯುವ ನೀರಿನ ಭದ್ರತೆ, ಅಂತರ್ಜಲ ಮಟ್ಟ ಸುಧಾರಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಹಕಾರವಾಗಲಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.

ಯೋಜನೆಗೆ 2026ರ ಜುಲೈ 21ರಂದು ₹244 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು 30 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

“ಸಣ್ಣ ನೀರಾವರಿ ಯೋಜನೆಗಳು ಕೇವಲ ನೀರಾವರಿ ಸೌಲಭ್ಯಕ್ಕೆ ಸೀಮಿತವಾಗಿರುವುದಿಲ್ಲ. ಅವು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಭದ್ರತೆ, ಅಂತರ್ಜಲ ಪುನರ್ಭರ್ತಿ ಮತ್ತು ರೈತರ ಜೀವನೋಪಾಯಕ್ಕೆ ನೇರವಾಗಿ ಸಂಬಂಧಿಸಿದ ಮೂಲಸೌಕರ್ಯ. ಈ ಯೋಜನೆಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಸಚಿವರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now