ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : 2026ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಎಸ್. ಸಿದ್ದರಾಜು ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 35 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಿದ್ದರಾಜು ಅವರಿಗೆ ಈ ಗೌರವ ಒಲಿದುಬಂದಿದೆ. ಪತ್ರಿಕೆ ವಿತರಕರಾಗಿ ಬದುಕು ಆರಂಭಿಸಿ, ನಂತರ ದೃಶ್ಯ ಮಾಧ್ಯಮದಲ್ಲಿ ನೊಂದವರ ಧ್ವನಿಯಾಗಿ ಸಮಾಜಮುಖಿ ಪತ್ರಿಕೋದ್ಯಮ ನಡೆಸಿದ ಅವರ ಅಪೂರ್ವ ಸಾಧನೆಗೆ ಈ ಮನ್ನಣೆ ಸಿಕ್ಕಿದೆ. ನಾಳೆ ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.
ಎಸ್.ಸಿದ್ದರಾಜು ಅವರ ಪರಿಚಯ : ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ
ಗ್ರಾಮದಲ್ಲಿ ಸಿದ್ದಪ್ಪ ಹಾಗು ರತ್ನಮ್ಮ ಎಂಬ ದಂಪತಿಗಳ ಜೇಷ್ಟಪುತ್ರನಾಗಿ 25-11-1985 ರಂದು ಜನಿಸಿದರು. ಕಡುಬಡ ಕುಟುಂಬದಲ್ಲಿ ಜನಿಸಿರುವ ಇವರು ಆರಂಭದಲ್ಲಿ ದಿನಪತ್ರಿಕೆ ಹಾಕುವ ವೃತ್ತಿಯ ಮೂಲಕ ಮಾದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಕೋರಿಯರ್ ಸರ್ವೀರ್ ಮಾಡಿಕೊಂಡೇ, ಎಂಎ ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಾಸ್ ಕಮ್ಯುನಿಕೇಶನ್ಸ್ ವಿಭಾಗದಲ್ಲಿ ಜರ್ನಲಿಸಮ್ ಹಾಗೂ ಹಂಪಿವಿಶ್ವವಿದ್ಯಾನಿಲಯದಲ್ಲಿ ಡಿಪ್ಲೊಮೊ ಇನ್ ಜರ್ನಲಿಸಮ್ ಮುಗಿಸಿದ್ದಾರೆ. ಸ್ಕೌಟ್ಸ್, ಕ್ರೀಡೆ ಹಾಗು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದು,ಅಪಾರ ಕೊಡುಗೆ ನೀಡಿದ್ದಾರೆ. ಚಿಕ್ಕಂದಿನಿಂದಲೂ ಖೋಖೋ ಕ್ರೀಡಾಪಟುವಾಗಿದ್ದ ಇವರು ಮೂರು ಬಾರಿ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿ ಬಂಗಾರದ ಪದಕ ಗಳಿಸಿದ್ದಾರೆ.ಪ್ರಸ್ತುತ ಅಮೋಘ ಕ್ರೀಡಾ ಮತ್ತು ಸಾಂಸ್ಕ್ರತಿಕ ಸಂಘದ ಪ್ರಧಾನಕಾರ್ಯದರ್ಶಿಯಾಗಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲೂ ನಿಸ್ವಾರ್ಥ ಸೇವೆಗೈದಿರೋ ಇವರಿಗೆ ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂಖಾನ್ ಅವರು ಚತುರತಾ ಚರಣ್ಎಂಬ ಪ್ರಶಸ್ತಿನೀಡಿ ಗೌರವಿಸಿದ್ದಾರೆ.
ಕಳೆದ 16 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸತ್ಯ, ನಂಬಿಕೆ ಹಾಗು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಮೂಲಕ ಸುದ್ದಿನೇತ್ರ, ಬೆಟ್ಟದ ಸಿರಿ, ಕ್ರಾಂತಿದೀಪ, ರಾಜ್ ನ್ಯೂಸ್ ಕನ್ನಡ, ಸುದ್ದಿ ಟಿವಿ ಜಿಲ್ಲಾವರದಿಗಾರರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರರಾಗಿ ಹತ್ತು ವರ್ಷಗಳನ್ನು ಪೂರೈಸುವ ಮೂಲಕ ನೊಂದವರು, ಅಶಕ್ತರು, ಮಹಿಳೆಯರು ಹಾಗು ಬಡವರ ಪರ ದ್ವನಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಾರ್ವಜನಿಕ ಶೌಚಾಲಯದಲ್ಲಿ ವಾಸವಾಗಿದ್ದ ಕಡು ಬಡ ಕುಟುಂಬವೊಂದನ್ನು ಗುರುತಿಸಿ ವಾಹಿನಿಯಲ್ಲಿ ಪ್ರಚಾರ ಪಡಿಸುವ ಮೂಲಕ ಸರ್ಕಾರ ಹಾಗು ಸಮಾಜಕಲ್ಯಾಣ ಸಚಿವರ ಗಮನ ಸೆಳೆದು ಎರಡು ಕುಟುಂಬಗಳಿಗೆ ಸೂರು ಭಾಗ್ಯ ಕಲ್ಪಿಸುವಲ್ಲಿ ಪ್ರಮುಖು ಪಾತ್ರವಹಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಳೆದಬಾರಿ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಈಬಾರಿ ರಾಜ್ಯ ಸಮಿತಿ ಸದಸ್ಯರಾಗಿ ಗೆಲುವು ಸಾಧಿಸುವ ಮೂಲಕ ಪತ್ರಕರ್ತರ ಪರ ಶ್ರಮಿಸಲು ಸಂಘದ ಚುಕ್ಕಾಣಿ ಹಿಡಿದಿದ್ದಾರೆ. ಹಾಗೆಯೇ ಪತ್ರಕರ್ತ ಸಹೋದ್ಯೋಗಿಗಳ ಸ್ನೇಹಜೀವಿಯಾಗಿರುವ ಇವರು ಪತ್ರಕರ್ತರ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ನಿವೇಶನ ಕೊಡಿಸಲು ಹೋರಾಟ ನಡೆಸಿದ್ದು, ಪತ್ರಕರ್ತರು ಹಾಗು ಅವರಕುಟುಂಬಸ್ಥರ ಆರೋಗ್ಯ ಮತ್ತು ಅವರ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಸದಾ ಶ್ರಮವಹಿಸುವ ಇವರನ್ನು 2026 ನೇ ಸಾಲಿನ ಚಿತ್ರದುರ್ಗ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.











