Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ನೆಲಮಂಗಲದ ಮಹಿಮಾ ರಂಗನಾಥ ಸ್ವಾಮಿ ದೇಗುಲ : ಪ್ರಕೃತಿಯ ಮಡಿಲಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ತಾಣ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್ : ಕರ್ನಾಟಕದಲ್ಲಿ ಬಹಳಷ್ಟು ರಂಗನಾಥ ಸ್ವಾಮಿ ದೇವಾಲಯಗಳು ಬೆಟ್ಟದ ಮೇಲೆ ಇರುವುದು ನಾವು ನೀವೆಲ್ಲರೂ ನೋಡಿರುತ್ತೇವೆ. ಬೆಟ್ಟದ ಮೇಲೆ ದೇವರ ದರ್ಶನ ಮಾಡಿ ಪ್ರಕೃತಿಯ ಜೊತೆಗೆ ಒಂದು ದಿನ ಕಳೆದು ಆಧ್ಯಾತ್ಮಿಕವಾಗಿ, ದೈಹಿಕ, ಮಾನಸಿಕ ನೆಮ್ಮದಿ ಸಿಗುವಂತಾಗಲು ನಮ್ಮ ಹಿರಿಯರು ಮಾಡಿದ ಒಂದು ಸರಳ ಉಪಾಯವಾಗಿತ್ತು. ಭಕ್ತಿಯ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಇದೊಂದು ಪ್ರತಿಯೊಬ್ಬರಿಗೂ ಸಿಗುತ್ತಿದ್ದ ಅವಕಾಶವಾಗಿತ್ತು.
ಅಂತಹ ಸುಂದರವಾದ ಒಂದು ಸ್ಥಳವೇ ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನ.

ಪ್ರಕೃತಿಯ ಜೊತೆಗೆ ದೇವರ ಧ್ಯಾನ :
ಪ್ರಕೃತಿಯ ಜೊತೆಗೆ ದೇವರ ಧ್ಯಾನ ಮಾಡಲು, ಧ್ಯಾನಿಸಲು ಇದೊಂದು ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ.
ಈ ಸ್ಥಳ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದಲ್ಲಿ.

ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬೆಂಗಳೂರಿನಿಂದ 48 ಕಿ.ಮೀ ದೂರದಲ್ಲಿ ಹಾಗೂ ಡಾಬಸ್ ಪೇಟೆಯಿಂದ 9 ದೂರದಲ್ಲಿರುವ ಈ ದೇವಾಲಯಕ್ಕೆ ತಲುಪಲು ಮುಖ್ಯ ರಸ್ತೆಯಿಂದ ಮಹಿಮಾಪುರ ಗ್ರಾಮದ ದಾರಿಯಲ್ಲಿ ಸಾಗಬೇಕು . ಡಾಬಸ್ ಪೇಟೆಯಿಂದ ಮುಂದಕ್ಕೆ ಸಾಗಿ ಬಲಭಾಗಕ್ಕೆ ತಿರುವು ತೆಗೆದುಕೊಂಡರೆ ಈ ದೇವಾಲಯದ ಕಮಾನು ಸ್ವಾಗತ ಕೋರುತ್ತದೆ. ರಸ್ತೆಯಿಂದಲೇ ಈ ದೇವಾಲಯ ಇರುವ ಗುಡ್ಡವು ಗೋಚರಿಸುತ್ತದೆ.

ಗುಡ್ಡದ ಮೇಲ್ಭಾಗದಲ್ಲಿರುವ ದೇವಸ್ಥಾನವು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುಮಾರು 300 ಕಲ್ಲಿನ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು, ಭಕ್ತರಿಗೆ ಪ್ರಶಾಂತ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಬೆಟ್ಟವು ಹಿಂದೆ ವಿಷ್ಣುವಿನ ವಾಹನವಾದ ಗರುಡನು ತಪಸ್ಸು ಮಾಡಿದ ಸ್ಥಳವಾಗಿದೆ ಎನ್ನಲಾಗಿದೆ.
ಗರ್ಭಗೃಹದಲ್ಲಿ ಸಾಲಿಗ್ರಾಮ ಶಿಲೆಯು ಇದ್ದು ಇದು ದೇವರ ಮೂಲಸ್ಥಾನ ಎನಿಸಿದೆ. ಇದರ ಜೊತೆಗೆ ನಿಂತ ಭಂಗಿಯಲ್ಲಿ ಮಹಿಮಾಶ್ರೀರಂಗನಾಥ ಸ್ವಾಮಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನೂರಾರು ಕುಟುಂಬಸ್ಥರು ಈ ದೇವರಿಗೆ ಒಕ್ಕಲಾಗಿದ್ದು ಮನೆದೇವರು ಮಾಡಿಕೊಂಡಿದ್ದಾರೆ ವಾರ್ಷಿಕವಾಗಿ ಈ ದೇವಾಲಯದ ಕೆಳಭಾಗದ ಮಹಿಮಾಪುರದಲ್ಲಿ ಜಾತ್ರೆ ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ತಮ್ಮ ಮನೆಯಲ್ಲಿ ಒಬ್ಬರಿಗೆ ಈ ದೇವರ ಹೆಸರನ್ನು ಕಡ್ಡಾಯವಾಗಿ ಇಡುವ ರೂಢಿ ಇಟ್ಟು ಕೊಂಡಿದ್ದಾರೆ.

ಈ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಬಗ್ಗೆ ಹೇಳಲಾಗುತ್ತಿದೆಯಾದರೂ ಇದರ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಆದರೆ ಇಲ್ಲಿರುವ ವಾಸ್ತು ಹಾಗೂ ಕಂಬಗಳ ಶೈಲಿಯಿಂದ ಇದು ವಿಜಯನಗರ ಕಾಲದಲ್ಲಿ ಮತ್ತಷ್ಟು ವಿಸ್ತರಣೆಯಾಗಿರುವ ಬಗ್ಗೆ ಗಮನಿಸಬಹುದು. ಇದೀಗ ಹಿಂದೆ ಇದ್ದ ದೇವಾಲಯವನ್ನು ತೆಗೆದು ನೂತನವಾಗಿ ದ್ರಾವಿಡ ಶೈಲಿಯಲ್ಲಿ ಮತ್ತಷ್ಟು ವಿಶಾಲವಾಗಿ ನಯನ ಮನೋಹರವಾಗಿ ದೇವಾಲಯ ನಿರ್ಮಾಣ ಮಾಡಲಾಗಿದ್ದು ಪ್ರವಾಸಿಗರಿಗೆ ಬಂದ ಭಕ್ತರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಾಗಿದೆ.

ದೇವಾಲಯದ ಹತ್ತಿರದ ಭಾಗದವರೆಗೂ ವಾಹನಗಳು ಸರಾಗವಾಗಿ ಹೋಗಲು ರಸ್ತೆಯನ್ನು ನಿರ್ಮಾಣ ಕೂಡ ಮಾಡಲಾಗಿದೆ. ದೇವಾಲಯದ ಹತ್ತಿರದಿಂದ ಶಿವಗಂಗಾ ಬೆಟ್ಟವು ಅತ್ಯಂತ ರಮಣೀಯವಾಗಿ ಗೋಚರಿಸುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಹಾಗೂ ಅಲ್ಲಿನ ವಾತಾವರಣವನ್ನು ಸ್ಪಷ್ಟವಾಗಿ ಈ ಸ್ಥಳದಿಂದ ನೋಡಬಹುದು. ಆಧುನಿಕತೆಯ ಭರಾಟೆಯಲ್ಲಿ ದೇವಾಲಯದ ಅಕ್ಕಪಕ್ಕ ಈಗಾಗಲೇ ಕೈಗಾರಿಕಾ ಪ್ರದೇಶವು ಪ್ರಾರಂಭವಾಗಿ ಮುಂದಿನ 10- 15 ವರ್ಷಗಳಲ್ಲಿ ಈ ಸ್ಥಳವು ಮರೆಯಾಗುವ ಸಾಧ್ಯತೆ ಇದೆ.

ಹಸಿರಿನ ಹಾದಿಯಲ್ಲಿ :
ಪ್ರಕೃತಿಯೊಂದಿಗೆ ಆತ್ಮೀಯ ಪಯಣ ಬದುಕಿನ ಜಂಜಾಟ ಗಳಿಂದ ದೂರ ಸರಿದು, ಪ್ರಕೃತಿಯ ಮಡಿಲಿನಲ್ಲಿದ್ದಾಗ ನಮ್ಮೊಳಗೆ ಮನಸ್ಸಿನ ಧ್ವನಿ ಕೇಳಿಸುತ್ತದೆ.
ಸುತ್ತಲೂ ಎತ್ತರಕ್ಕೆ ಬೆಳೆದ ಮರಗಳ ನಡುವೆ, ಹಸಿರಿನ ಹೊದಿಕೆ ಹೊದ್ದ ಬೆಟ್ಟದ ಇಳಿಜಾರಿನಲ್ಲಿ ಸಾಗುವ ಈ ದಾರಿ ಕೇವಲ ಮೆಟ್ಟಿಲುಗಳ ಹಾದಿಯಾಗಿರದೆ ಅದು ಪ್ರಕೃತಿಯ ಕಡೆಗೆ ಸಾಗುವ ಪಯಣದಂತೆ ಭಾಸವಾಗುತ್ತದೆ.
ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಮರಗಳು ಬಂದ ಭಕ್ತರನ್ನು ತಮ್ಮ ತೋಳು ಚಾಚಿ ಸ್ವಾಗತಿಸುವಂತೆ ಕಾಣುತ್ತವೆ. ಎಲೆಗಳ ನಡುವೆ ತೂರಿಬರುವ ಸೂರ್ಯನ ಕಿರಣಗಳು ದಾರಿಯ ಮೇಲೆ ಬೆಳಕು-ನೆರಳಿನ ಚಿತ್ತಾರವನ್ನು ಬಿಡಿಸಿವೆ.
ಇಲ್ಲಿ ಪ್ರಕೃತಿಯೇ ಕರೆಯುತ್ತಿರುವಂತೆ ಭಾಸವಾಗುತ್ತದೆ. ದೇವಾಲಯದ ಮುಂದಿನ ವಿಶಾಲವಾದ ಜಾಗದಲ್ಲಿ ನಿಂತಾಗ ದೂರದವರೆಗೆ ಹರಡಿರುವ ಹಸಿರು ಭೂದೃಶ್ಯವನ್ನು ನೋಡಿದರೆ, ನಮ್ಮ ಚಿಂತೆಗಳೆಲ್ಲವೂ ನಿಧಾನವಾಗಿ ಕರಗಿಹೋಗುವಂತೆ ಅನಿಸುತ್ತದೆ. ದೂರದ ಕ್ಷಿತಿಜವು ಆಕಾಶ ಮತ್ತು ಭೂಮಿಯ ನಡುವಿನ ಅದೃಶ್ಯ ಸೇತುವೆಯಂತೆ ಕಾಣುತ್ತದೆ.ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗದ ದೃಶ್ಯ ಮನಸ್ಸಿಗೆ ಅಪಾರ ಸಂತೋಷವನ್ನು ನೀಡುತ್ತದೆ. ಈ ದಾರಿಯಲ್ಲಿ ನಡೆಯುವಾಗ ಪ್ರತಿಯೊಂದು ಹೆಜ್ಜೆಯೂ ಒಂದು ಅನುಭವ. ಮರಗಳ ಸದ್ದು, ಪಕ್ಷಿಗಳ ಕಲರವ, ತಂಪಾದ ಗಾಳಿ ಮತ್ತು ಮಣ್ಣಿನ ಪರಿಮಳ…ಇವೆಲ್ಲವೂ ಸೇರಿ ಪ್ರಕೃತಿಯೊಂದು ಮಧುರ ಸಂಗೀತವನ್ನು ಹಾಡುತ್ತಿರುವಂತೆ ಭಾಸವಾಗುತ್ತದೆ.

ಇಂತಹ ಹಸಿರು ತಾಣಗಳನ್ನು ಕೇವಲ ಪ್ರವಾಸದ ಸ್ಥಳಗಳೆಂದು ನೋಡದೆ, ನಮ್ಮ ಬದುಕಿನ ಅಮೂಲ್ಯ ಸಂಪತ್ತೆಂದು ಕಾಣಬೇಕು. ಹಸಿರಿನ ಈ ಹಾದಿ ಮುಗಿಯಬಹುದು.
ಆದರೆ ಅದು ಮನಸ್ಸಿನಲ್ಲಿ ಮೂಡಿಸುವ ನೆನಪುಗಳಿಗೆ ಎಂದಿಗೂ ಅಂತ್ಯವಿಲ್ಲ.

ಪ್ರಕೃತಿಯ ಮಡಿಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬೆಟ್ಟ, ಗುಡ್ಡ, ಕಾಡು ಮತ್ತು ಹಸಿರು ಪರಿಸರಕ್ಕಿಂತ ಸುಂದರವಾದ ಸ್ಥಳ ಮತ್ತೊಂದಿಲ್ಲ. ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗದ ದೃಶ್ಯ ಮನಸ್ಸಿಗೆ ಅಪಾರ ಸಂತೋಷವನ್ನು ನೀಡುತ್ತದೆ. ಬೆಟ್ಟದ ಕೆಳಭಾಗದಲ್ಲಿ ಹಸಿರಿನಿಂದ ಕೂಡಿದ ಹೊಲಗಳು ಮತ್ತು ದಟ್ಟವಾದ ಮರಗಳ ಸಾಲುಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ವಿವಿಧ ಬಣ್ಣದ ಹೂವುಗಳು, ಹಸಿರು ಎಲೆಗಳು ಮತ್ತು ಎತ್ತರವಾಗಿ ಬೆಳೆದಿರುವ ಮರಗಳು ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ನೀಲಾಕಾಶವು ಭೂಮಿಯ ಹಸಿರಿನೊಂದಿಗೆ ಸೇರಿ ಸುಂದರವಾದ ಚಿತ್ರವೊಂದನ್ನು ಮೂಡಿಸಿದೆ.
ಬೆಟ್ಟದ ಮೇಲಿನಿಂದ ಬೀಸುವ ತಂಪಾದ ಗಾಳಿ ದೇಹಕ್ಕೂ -ಮನಸ್ಸಿಗೂ ಉಲ್ಲಾಸವನ್ನು ನೀಡುತ್ತದೆ.
ಬೆಟ್ಟ ಹತ್ತುವಾಗ ಬೆಟ್ಟದ ಮೇಲಕ್ಕೆ ಸಾಗುವ ಮೆಟ್ಟಿಲುಗಳ ಸುಂದರ ಮಾರ್ಗ ಕಾಣಿಸುತ್ತದೆ. ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಕಬ್ಬಿಣದ ಹಿಡಿಕೆಗಳನ್ನು ಅಳವಡಿಸಿರುವುದರಿಂದ ಪ್ರವಾಸಿಗರಿಗೆ ಏರಲು ಅನುಕೂಲವಾಗಿದೆ. ಮೆಟ್ಟಿಲುಗಳ ಸುತ್ತಲೂ ಬೆಳೆದಿರುವ ಹಸಿರು ಗಿಡಮರಗಳು ದಾರಿಯುದ್ದಕ್ಕೂ ನೆರಳು ಮತ್ತು ತಂಪನ್ನು ನೀಡುತ್ತವೆ. ಸೂರ್ಯನ ಕಿರಣಗಳು ಮರಗಳ ಎಲೆಗಳ ನಡುವೆ ಹಾದು ಮೆಟ್ಟಿಲುಗಳ ಮೇಲೆ ಬೀಳುತ್ತಿರುವ ದೃಶ್ಯ ಬಹಳ ಆಕರ್ಷಕವಾಗಿದೆ. ಇಂತಹ ಪ್ರಕೃತಿ ಸೌಂದರ್ಯವಿರುವ ಸ್ಥಳಗಳು ಪ್ರವಾಸಿಗರನ್ನು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಸಹ ಆಕರ್ಷಿಸುತ್ತವೆ. ಬೆಟ್ಟ ಹತ್ತುವುದು ಉತ್ತಮ ವ್ಯಾಯಾಮವಾಗಿದ್ದು, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಒತ್ತಡ ಮತ್ತು ಆಯಾಸ ದೂರವಾಗುತ್ತದೆ. ಕನ್ನಡ ಹಾಗೂ ವಿವಿಧ ಭಾಷೆಯ ಚಲನಚಿತ್ರಗಳ ಹಾಡುಗಳು ಕೂಡ ಚಿತ್ರಿಕರಣಗೊಂಡಿರುವ ಸ್ಥಳ ಇದಾಗಿದೆ. ಜಗ್ಗೇಶ್ ಅಭಿನಯಿಸಿರುವ ಭಂಡ ನನ್ನ ಗಂಡ ಚಿತ್ರದ’ ಅಂತಿಂಥ ಗಂಡು ನಾನಲ್ಲ,ನನ್ನಂಥ ಭಂಡ ಯಾರಿಲ್ಲ ‘ಹಾಡು ಇಲ್ಲಿಯೇ ಚಿತ್ರೀಕರಣಗೊಂಡಿದೆ.
ದೇವಾಲಯವು ಪ್ರತಿದಿನ ಬೆಳಿಗ್ಗೆ 10 ರಿಂದ ಒಂದು ಗಂಟೆ ತನಕ ತೆರೆದಿರುತ್ತದೆ. ಒಂದು ದಿನದ ಪಿಕ್ನಿಕ್ ಗಾಗಿ ಸಂಸಾರ ಸಮೇತರಾಗಿ ಹೋಗಿ ಬರುವ ಸ್ಥಳ ಇದಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now