ಬೆಂಗಳೂರು: ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದಿದ್ದ ಮಹತ್ವದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಒಟ್ಟು 43 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಎಲ್ಲೆಡೆ ತೀವ್ರ ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆಯಿಂದ ಮತ ಎಣಿಕೆ ಆರಂಭ
ಕಳೆದ ಅಕ್ಟೋಬರ್ 23 ರಂದು ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನಿಗದಿಯಂತೆ ಇಂದು ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಸ್ಟ್ರಾಂಗ್ ರೂಮ್ಗಳಲ್ಲಿ ಬಿಗಿ ಭದ್ರತೆ
ಪಶ್ಚಿಮ ಪದವೀಧರರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿವಿ ಸ್ಟ್ರಾಂಗ್ ರೂಮ್ನಲ್ಲಿ ಇರಿಸಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಗಳು ಕಲಬುರಗಿ ವಿವಿಯ ಗಣಿತಶಾಸ್ತ್ರ ವಿಭಾಗದ ಸ್ಟ್ರಾಂಗ್ ರೂಮ್ನಲ್ಲಿ ಭದ್ರವಾಗಿವೆ. ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನ ಸ್ಟ್ರಾಂಗ್ ರೂಮ್ನಲ್ಲಿ ಇಡಲಾಗಿದೆ.
ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ
ಮತ ಎಣಿಕೆ ಸುಸೂತ್ರವಾಗಿ ನಡೆಯಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಸ್ಟ್ರಾಂಗ್ ರೂಮ್ಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.












