ಬೆಂಗಳೂರು: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ವಿಶೇಷ ಸಮಗ್ರ ಪರಿಷ್ಕರಣೆ – 2026ರ ಅನ್ವಯ ಸಿದ್ಧಪಡಿಸಲಾದ ಅಂತಿಮ ಮತದಾರರ ಪಟ್ಟಿಯನ್ನು ಇಂದು ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸಲಿದೆ.
ಈ ಪರಿಷ್ಕೃತ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 4,55,00,011ಕ್ಕೆ ತಲುಪಿದೆ. ಇಂದು ಮಧ್ಯಾಹ್ನ ಬಿಡುಗಡೆಯಾಗಲಿರುವ ಅಂತಿಮ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟು 2,29,12,355 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 2,25,40,493 ರಷ್ಟಿದೆ. ಇವರೊಂದಿಗೆ 2,841 ತೃತೀಯ ಲಿಂಗಿ ಮತದಾರರು ಹಾಗೂ 44,322 ಸೇವಾ ಮತದಾರರು ಪಟ್ಟಿಯಲ್ಲಿದ್ದಾರೆ.
ಹೊಸದಾಗಿ ಮತದಾನದ ಹಕ್ಕು ಪಡೆದಿರುವ 18 ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 6,83,364 ರಷ್ಟಿದೆ. ಇದೇ ವೇಳೆ 85 ವರ್ಷಕ್ಕಿಂತ ಮೇಲ್ಪಟ್ಟ 3,92,134 ಹಿರಿಯ ನಾಗರಿಕ ಮತದಾರರು ಮತ್ತು 5,65,340 ವಿಶೇಷ ಚೇತನ (ದಿವ್ಯಾಂಗ) ಮತದಾರರು ರಾಜ್ಯದಲ್ಲಿದ್ದಾರೆ. ಇದಲ್ಲದೆ 3,252 ಸಾಗರೋತ್ತರ ಮತದಾರರು ಕೂಡ ಪಟ್ಟಿಯಲ್ಲಿ ನೋಂದಾಯಿತರಾಗಿದ್ದಾರೆ.
ಹೆಸರು ಸೇರ್ಪಡೆ, ತಿದ್ದುಪಡಿಗೆ ಮುಂದುವರಿಯಲಿರುವ ಅವಕಾಶ
ಅಂತಿಮ ಪಟ್ಟಿ ಪ್ರಕಟವಾದ ನಂತರವೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳು ನಮೂನೆ-6, ಸಾಗರೋತ್ತರ ಮತದಾರರು ನಮೂನೆ-6ಎ, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ವಿಳಾಸ ಬದಲಾವಣೆ ಅಥವಾ ವಿವರಗಳ ತಿದ್ದುಪಡಿಗೆ ನಮೂನೆ-8 ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ‘ECINet’ ಮೊಬೈಲ್ ಆ್ಯಪ್ ಬಳಸಬಹುದು ಅಥವಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 1950 ಅಥವಾ 180042551950 ಸಹಾಯವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ.











