Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎದೆನೋವು ಬಂದು ತಾನಾಗಿಯೇ ಕಡಿಮೆಯಾಗುತ್ತಿದೆಯೇ? ನಿರ್ಲಕ್ಷಿಸಬೇಡಿ, ಹೃದಯಾಘಾತದ ಎಚ್ಚರಿಕೆಯೂ ಆಗಿರಬಹುದು!

---Advertisement---

ನವದೆಹಲಿ : ತಾನಾಗಿಯೇ ಕಡಿಮೆಯಾಗುವ ಎದೆನೋವು ಸಾಮಾನ್ಯವಾಗಿ ಅಪಾಯಕಾರಿಯಲ್ಲ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ನೋವು ನಿರಂತರವಾಗಿ ಇದ್ದರೆ ಮಾತ್ರ ಗಂಭೀರ ಸಮಸ್ಯೆ ಎಂದು ಭಾವಿಸುವ ಪ್ರವೃತ್ತಿ ನಮ್ಮಲ್ಲಿದೆ.

ಊಟದ ನಂತರ ಎದೆಯಲ್ಲಿ ಭಾರವೆನಿಸಿದರೆ ಅದನ್ನು ಗ್ಯಾಸ್ಟ್ರಿಕ್ ಎಂದೋ, ನಡೆಯುವಾಗ ಎದೆ ಬಿಗಿತ ಉಂಟಾದರೆ ಸುಸ್ತು ಎಂದೋ ಕಡೆಗಣಿಸಿ, ನೋವು ಕಡಿಮೆಯಾದ ತಕ್ಷಣ ದಿನನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ನೋವು ಕಡಿಮೆಯಾಯಿತು ಎಂದರೆ ರೋಗಲಕ್ಷಣ ತಾತ್ಕಾಲಿಕವಾಗಿ ನಿಂತಿದೆ ಎಂದರ್ಥವೇ ಹೊರತು, ಆ ನೋವು ಏಕೆ ಕಾಣಿಸಿಕೊಂಡಿತು ಎಂಬ ಮೂಲ ಕಾರಣ ಪರಿಹಾರವಾಗಿದೆ ಎಂದಲ್ಲ ಎಂದು ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ.

ಎದೆನೋವು ತನ್ನಷ್ಟಕ್ಕೆ ತಾನೇ ಕಡಿಮೆಯಾಗುವುದು ಏಕೆ?

ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳು ಕಿರಿದಾದಾಗ, ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಹೃದಯಕ್ಕೆ ಬೇಕಾದಷ್ಟು ರಕ್ತ ಸಿಗುತ್ತದೆ. ಆದರೆ ವೇಗವಾಗಿ ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಹೃದಯದ ಸ್ನಾಯುಗಳಿಗೆ ಹೆಚ್ಚಿನ ರಕ್ತದ ಅಗತ್ಯವಿರುತ್ತದೆ, ಆಗ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿ ಎದೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಕೆಲಸ ನಿಲ್ಲಿಸಿ ವಿಶ್ರಾಂತಿ ಪಡೆದಾಗ ನೋವು ಕಡಿಮೆಯಾಗಬಹುದು. ಈ ಲಕ್ಷಣವನ್ನು ‘ಆಂಜಿನಾ’ ಎನ್ನಲಾಗುತ್ತದೆ. ವಿಶ್ರಾಂತಿಯ ನಂತರ ನೋವು ಕಡಿಮೆಯಾಗುವುದು ರೋಗಲಕ್ಷಣದ ಒಂದು ಭಾಗವೇ ಹೊರತು, ಅಪಾಯವಿಲ್ಲ ಎಂಬುದಕ್ಕೆ ಪುರಾವೆಯಲ್ಲ ಸ್ಪಷ್ಟಪಡಿಸಿದ್ದಾರೆ.

ಸಿನಿಮೀಯ ಕಲ್ಪನೆ ಮತ್ತು ವಾಸ್ತವದ ಹೃದಯಾಘಾತ

ಹೃದಯಾಘಾತದ ಲಕ್ಷಣಗಳ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆಗಳಿವೆ. ಸಿನಿಮಾಗಳಲ್ಲಿ ತೋರಿಸುವಂತೆ ವ್ಯಕ್ತಿ ಎದೆ ಹಿಡಿದು ಒದ್ದಾಡುವುದು, ಎಡಗೈಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು ಅಥವಾ ವಿಪರೀತ ಬೆವರು ಸುರಿಯುವುದು ಮಾತ್ರವೇ ಹೃದಯಾಘಾತದ ಲಕ್ಷಣಗಳಲ್ಲ. ಈ ರೀತಿಯ ಲಕ್ಷಣಗಳಿಲ್ಲದಿದ್ದರೆ ಹೃದಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಜನ ತೀರ್ಮಾನಿಸಿಬಿಡುತ್ತಾರೆ. ಆದರೆ ವಾಸ್ತವದಲ್ಲಿ ಎದೆಯಲ್ಲಿ ಒತ್ತಡ, ಭಾರವೆನಿಸುವುದು ಅಥವಾ ಉರಿಯ ಅನುಭವ ಕೂಡ ಹೃದಯಾಘಾತದ ಲಕ್ಷಣಗಳಾಗಿರಬಹುದು. ಇದರೊಂದಿಗೆ ದವಡೆ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಉಸಿರಾಟದ ತೊಂದರೆ, ವಾಕರಿಕೆ ಹಾಗೂ ಅತಿಯಾದ ಆಯಾಸ ಕಾಣಿಸಿಕೊಳ್ಳಬಹುದು. ಎಲ್ಲಾ ಲಕ್ಷಣಗಳು ಒಟ್ಟಿಗೇ ಅಥವಾ ನಾಟಕೀಯ ರೀತಿಯಲ್ಲೇ ಕಾಣಿಸಿಕೊಳ್ಳಬೇಕೆಂದಿಲ್ಲ.

ಧೂಮಪಾನ ಮತ್ತು ಮಧುಮೇಹಿಗಳಲ್ಲಿ ಅಡಗಿರುವ ಗಂಡಾಂತರ

ಧೂಮಪಾನವು ಅಪಧಮನಿ ರೋಗ ಹಾಗೂ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಬಾರಿ ಹೃದಯಾಘಾತಕ್ಕೆ ಕಾರಣವಾದ ರಕ್ತ ಹೆಪ್ಪುಗಟ್ಟುವಿಕೆ ಆಂಜಿಯೋಗ್ರಾಂ ಪರೀಕ್ಷೆಗೂ ಮುನ್ನವೇ ಕರಗಿ ಹೋಗಬಹುದು, ಇದರಿಂದ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಬ್ಲಾಕೇಜ್ ಕಾಣಿಸದೇ ಇರಬಹುದು. ಆದರೆ ಇದರಿಂದ ಹೃದಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದರ್ಥವಲ್ಲ. ಇನ್ನೊಂದೆಡೆ, ಮಧುಮೇಹ ಇರುವವರಲ್ಲಿ ನರಗಳ ದೌರ್ಬಲ್ಯದಿಂದಾಗಿ ಎದೆನೋವಿನ ಮುನ್ಸೂಚನೆ ತಿಳಿಯುವುದೇ ಇಲ್ಲ. ಇದನ್ನು ಸೈಲೆಂಟ್ ಹಾರ್ಟ್ ಅಟ್ಯಾಕ್ ಎನ್ನಲಾಗುತ್ತದೆ. ನೋವು ಕಾಣಿಸದೇ ಇದ್ದರೂ ಹೃದಯಕ್ಕೆ ಹಾನಿಯಾಗಿರುತ್ತದೆ. ಎಲ್ಲಾ ಎದೆನೋವು ಹೃದಯಕ್ಕೆ ಸಂಬಂಧಿಸಿದ್ದಲ್ಲದಿದ್ದರೂ, ಗ್ಯಾಸ್ಟ್ರಿಕ್ ಅಥವಾ ಮಾಂಸಖಂಡದ ನೋವು ಎಂದು ನೀವೇ ಸ್ವಯಂ ನಿರ್ಧಾರಕ್ಕೆ ಬರುವುದು ಅಪಾಯಕಾರಿ.

ತುರ್ತು ವೈದ್ಯಕೀಯ ನೆರವು ಪಡೆಯಬೇಕಾದ ಸಂದರ್ಭ

ಹೊಸದಾಗಿ ಕಾಣಿಸಿಕೊಳ್ಳುವ ಅಥವಾ ಕಾರಣವಿಲ್ಲದೆ ಬರುವ ಎದೆನೋವು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಮತ್ತೆ ಮತ್ತೆ ಮರುಕಳಿಸಿದರೆ, ಅಥವಾ ನೋವಿನ ಜೊತೆಗೆ ಉಸಿರಾಟದ ತೊಂದರೆ, ಅತಿಯಾದ ಬೆವರು, ವಾಕರಿಕೆ ಹಾಗೂ ತಲೆತಿರುಗುವಿಕೆ ಇದ್ದರೆ ತಕ್ಷಣವೇ ತುರ್ತು ವೈದ್ಯಕೀಯ ತಪಾಸಣೆ ಅಗತ್ಯ. ವ್ಯಾಯಾಮ ಮಾಡುವಾಗ ಅಥವಾ ದೈಹಿಕ ಶ್ರಮದ ವೇಳೆ ಎದೆನೋವು ಬಂದು ವಿಶ್ರಾಂತಿಯ ನಂತರ ಕಡಿಮೆಯಾದರೂ ಸಹ ಅದನ್ನು ಕಡೆಗಣಿಸಬಾರದು. ಇಂತಹ ಲಕ್ಷಣಗಳು ಕಂಡುಬಂದಾಗ ಸ್ವತಃ ವಾಹನ ಚಲಾಯಿಸದೆ, ಕೂಡಲೇ ಆಂಬುಲೆನ್ಸ್ ಕರೆಸಿ ಸಮೀಪದ ಆಸ್ಪತ್ರೆಗೆ ತೆರಳುವುದು ಸುರಕ್ಷಿತ.

Join WhatsApp

Join Now

Join Telegram

Join Now