ಬೆಂಗಳೂರು : ರಾಜ್ಯದ ಪಡಿತರ ಚೀಟಿ ಫಲಾನುಭವಿಗಳು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ನವೆಂಬರ್ 10ರವರೆಗೆ ವಿಸ್ತರಿಸಿದೆ. ಈ ಹಿಂದೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು.
ನಿಯಮಾನುಸಾರ ಇಲಾಖೆಯು ಇ-ಕೆವೈಸಿ ಮಾಡಿಸಿ ಒಂದು ವರ್ಷ ಕಳೆದ 1.15 ಕೋಟಿಗೂ ಅಧಿಕ ಫಲಾನುಭವಿಗಳು ಮತ್ತೊಮ್ಮೆ ಪರಿಶೀಲನೆ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. 5 ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿರುವ ಸುಮಾರು 54.27 ಲಕ್ಷ ಫಲಾನುಭವಿಗಳು.ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ.
ಫಲಾನುಭವಿಗಳು ತಮ್ಮ ಮೊಬೈಲ್ನಲ್ಲೇ ‘ಅನ್ನ ಸೇವೆ’ ಆ್ಯಪ್ ಮೂಲಕ ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ನ ಹೊಸ ಅಪ್ಡೇಟ್ ಲಭ್ಯವಿದೆ.

ಸಮೀಪದ ಪಡಿತರ ಅಂಗಡಿಗಳಿಗೆ (Fair Price Shops) ಭೇಟಿ ನೀಡಿ ‘AHARA’ ತಂತ್ರಾಂಶದ ಮುಖಾಂತರವೂ ದೃಢೀಕರಿಸಬಹುದು.
ನವೆಂಬರ್ 10ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಚಿತ ಪಡಿತರ ವಿತರಣೆ ಸ್ಥಗಿತಗೊಳ್ಳುವ ಅಥವಾ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.










