ಬೆಂಗಳೂರು: ರಾಜ್ಯಾದ್ಯಂತ ಅಕ್ಟೋಬರ್ 21 ರಂದು ಆಚರಿಸಲಾಗುವ ‘ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ’ ಕಾರ್ಯಕ್ರಮದಲ್ಲಿ ಸರ್ಕಾರದಿಂದ ಅಧಿಕೃತವಾಗಿ ಅನುಮೋದಿಸಲಾದ ಭಾವಚಿತ್ರವನ್ನೇ ಬಳಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅಕ್ಟೋಬರ್ 21 ರಂದು ರಾಜ್ಯಾದ್ಯಂತ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಲು ಈ ಹಿಂದೆಯೇ ಆದೇಶಿಸಲಾಗಿತ್ತು. ಇದೀಗ ದಿನಾಂಕ 17.10.2026 ರಂದು ಹೊರಡಿಸಲಾದ ಸರ್ಕಾರದ ಪತ್ರದ ಅನ್ವಯ, ಜಯಂತಿ ಕಾರ್ಯಕ್ರಮಕ್ಕಾಗಿ ಇ-ಮೇಲ್ ಮೂಲಕ ಕಳುಹಿಸಲಾಗಿರುವ ಅಧಿಕೃತ ಭಾವಚಿತ್ರವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.
ಆದ್ದರಿಂದ ಜಯಂತಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ಕಾರದಿಂದ ಅನುಮೋದನೆ ಪಡೆದ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಭಾವಚಿತ್ರವನ್ನೇ ಕಡ್ಡಾಯವಾಗಿ ಬಳಸಿಕೊಳ್ಳುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ವಲಯ ಜಂಟಿ ನಿರ್ದೇಶಕರಿಗೆ ಹಾಗೂ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ಸೂಚಿಸಲಾಗಿದೆ.












