Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಸ್ವಾಭಿಮಾನಿ ಪತ್ರಿಕಾ ಮಾರಾಟಗಾರ ಜಹೀರುದ್ದೀನ್ (ನಾಸೀರಜ್ಜ) ನಿಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್, 17: ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ, ಮೂರೂವರೆ ದಶಕಗಳಿಂದ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿದ್ದ ಹಿರಿಯ ಚೇತನ ಜಹೀರುದ್ದೀನ್ (ನಾಸೀರಜ್ಜ) (80) ಅವರು ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಒಡನಾಡಿಗಳನ್ನು ಅಗಲಿದ್ದಾರೆ. ಇಂದು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಖಬರಸ್ತಾನ್ ದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕ ಸಂಖ್ಯೆ : 9901037519

ಕಾಯಕವೇ ಕೈಲಾಸವೆಂದು ಬದುಕಿದ ಶ್ರಮಜೀವಿ
ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವನ್ನು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿಕೊಂಡು ಬಂದವರು ನಾಸೀರಜ್ಜ. ಭಾರತಕ್ಕೆ ಸ್ವಾತಂತ್ರ್ಯ ಬಂದ 1947ರಲ್ಲೇ ಜನಿಸಿದ್ದ ಇವರು, ಶ್ರಮ ಸಂಸ್ಕೃತಿಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. 1970ರಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಬದುಕು ಆರಂಭಿಸಿದ್ದ ಇವರಿಗೆ, 1990ರ ದಶಕದಲ್ಲಿ ಕೌಟುಂಬಿಕ ಕಾರಣಗಳಿಂದ ಆರ್ಥಿಕ ಹಿನ್ನಡೆಯಾಗಿತ್ತು. ಆದರೂ ಧೃತಿಗೆಡದ ಇವರು, ಗಾಯತ್ರಿ ಸರ್ಕಲ್ ಬಳಿ ಪುಟ್ಟ ಪೆಟ್ಟಿಗೆ ಅಂಗಡಿ ತೆರೆದು ದಿನಪತ್ರಿಕೆಗಳ ಮಾರಾಟ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಸುಮಾರು 35 ವರ್ಷಗಳ ಕಾಲ ಸತತವಾಗಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಾ ಇಡೀ ನಗರಕ್ಕೆ ಚಿರಪರಿಚಿತರಾಗಿದ್ದರು.

ಪತ್ರಿಕೆ ಮಾರಿ ಕುಟುಂಬ ಕಟ್ಟಿದ ಸ್ವಾಭಿಮಾನದ ಪಯಣ
ದಿನಪತ್ರಿಕೆಗಳಿಗೆ ಅಪಾರ ಬೇಡಿಕೆಯಿದ್ದ ದಿನಗಳಲ್ಲಿ ದಿನಕ್ಕೆ 200 ರಿಂದ 300 ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಇವರು, ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಬೆಳೆಸಿದ ತೃಪ್ತಿ ಇವರದ್ದಾಗಿತ್ತು. ಮಗ ಗಾರೆ ಕೆಲಸದ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದರೂ, ಯಾರ ಮೇಲೂ ಅವಲಂಬಿತರಾಗಬಾರದು ಎಂಬ ಅಚಲ ಸಂಕಲ್ಪದಿಂದ ವೃದ್ಧಾಪ್ಯ ಮತ್ತು ಅನಾರೋಗ್ಯದ ನಡುವೆಯೂ ಪ್ರತಿದಿನ ಪತ್ರಿಕೆ ಮಾರಾಟ ಮಾಡುವ ಕಾಯಕವನ್ನು ಮುಂದುವರಿಸಿದ್ದರು.

ಯುವಪೀಳಿಗೆಗೆ ಸದಾ ಪ್ರೇರಣೆಯಾಗಿದ್ದ ವ್ಯಕ್ತಿತ್ವ
ಸಣ್ಣಪುಟ್ಟ ಸಂಕಷ್ಟಗಳಿಗೂ ಧೃತಿಗೆಡುವ ಅಥವಾ ಉದ್ಯೋಗವಿಲ್ಲವೆಂದು ಹತಾಶರಾಗುವ ಇಂದಿನ ತಲೆಮಾರಿನ ಯುವಕರಿಗೆ ನಾಸೀರಜ್ಜ ಅವರ ಬದುಕು ದೊಡ್ಡ ಪಾಠವಾಗಿತ್ತು. ಮೈ ನಡುಗುವ ವಯಸ್ಸಿನಲ್ಲೂ ಸ್ವಾಭಿಮಾನ ಬಿಡದೆ ದುಡಿದ ಇವರ ಶ್ರಮಜೀವಿ ವ್ಯಕ್ತಿತ್ವಕ್ಕೆ ಸ್ಥಳೀಯ ಸಾರ್ವಜನಿಕರು ಮತ್ತು ಓದುಗರು ಅಪಾರ ಗೌರವ ನೀಡುತ್ತಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now