ಸುದ್ದಿಒನ್, ಚನ್ನಗಿರಿ, ಅಕ್ಟೋಬರ್. 10 : ಕೇದಾರಲಿಂಗ ಶಾಖಾ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಂಗಸೌರಭ ನಾಟ್ಯ ಕಲಾ ಹವ್ಯಾಸಿ ಸಂಘ ಸಂಯುಕ್ತ ಆಶ್ರಯದಲ್ಲಿ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಆವರಣದಲ್ಲಿ ತ್ರಿಪದಿಕವಿ ಮಳಲಕೆರೆ ಗುರುಮೂರ್ತಿ ಸವಿನೆನಪಿನ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಅಕ್ಟೋಬರ್ 11 ರಂದು ಬೆಳಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ.
ಹಿರೇಮಠದ ಪೀಠಾಧ್ಯಕ್ಷ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕವಿ ಜಿ.ಮುದ್ದುವೀರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ.ಆನಂದ ಋಗ್ವೇದಿ ಅಧ್ಯಕ್ಷತೆ ವಹಿಸುವರು.
ಸಾಹಿತಿ ಶಿವಯೋಗಿ ಹಿರೇಮಠ್, ಪತ್ರಕರ್ತ ಚಂದ್ರಹಾಸ ಹಿರೇಮಳಲಿ, ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ರುದ್ರೇಶ್, ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ ಕೊಟ್ರೇಶ್, ವೈದ್ಯಸಾಹಿತಿ ಡಾ.ನಮಿತಾ ಸತೀಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕಿನ ಸು.20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸುವರು ಎಂದು ಸಂಘಟಕ ಎಂ. ಅಣ್ಣೋಜಿರಾವ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.










