ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಅ. 10 : ಚಳ್ಳಕೆರೆ ತಾಲೂಕು ತಿಮ್ಮಪ್ಪಯ್ಯನಹಳ್ಳಿ ನ್ಯಾಯಬೆಲೆ ಅಂಗಡಿ ಮಾಲೀಕ ಮತ್ತು ಆತನ ಮಗ ಸಚಿನ್ ಕುಮಾರ್ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಸಭ್ಯ ವರ್ತನೆ, ಉದ್ಧಟತನದ ಉತ್ತರ ಮತ್ತು ಸುಳ್ಳು ಕೇಸು ದಾಖಲಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ) ಚಳ್ಳಕೆರೆ ತಾಲೂಕು ಘಟಕ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಕೆ.ವಿ. ವೀರಭದ್ರ ಕೆರೆಯಾಗಳಹಳ್ಳಿ ಸರ್ಕಾರ 1ನೇ ತಾರೀಖಿನಿಂದ 30ನೇ ತಾರೀಖಿನವರೆಗೂ ಇ-ಕೆವೈಸಿ ಮಾಡಲು ಆದೇಶಿಸಿದೆ. ಆದರೆ ಸದರಿ ನ್ಯಾಯಬೆಲೆ ಅಂಗಡಿ ಮಾಲೀಕ ಇ-ಕೆವೈಸಿ ಮಾಡದೆ ನಿರ್ಲಕ್ಷ್ಯವಹಿಸಿ ಕರ್ತವ್ಯ ಲೋಪ ಮಾಡುತ್ತಿದ್ದಾನೆ. ಗ್ರಾಮದ ಸಾರ್ವಜನಿಕರು ಇ-ಕೆವೈಸಿ ಯಾವಾಗ ಮಾಡುತ್ತೀರಿ ಎಂದು ಕೇಳಿದರೆ “ನಾನು ಯಾವಾಗ ಮಾಡುತ್ತೇನೋ ಅವಾಗ ಬಂದು ಮಾಡಿಸಿಕೊಳ್ಳಿ” ಎಂದು ಉಡಾಫೆ ಮಾತುಗಳಿಂದ ಉತ್ತರಿಸುತ್ತಾನೆ ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 2682 ಜನಸಂಖ್ಯೆಯಲ್ಲಿ ಕೇವಲ 163 ಜನರಿಗೆ ಮಾತ್ರ ಇ-ಕೆವೈಸಿ ಮಾಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಆದ್ದರಿಂದ ಜಂಟಿ ನಿರ್ದೇಶಕರ ಮೂಲಕ ಕೂಲಂಕುಷವಾಗಿ ಇ-ಕೆವೈಸಿ ಠಿಡಿogಡಿess ಡಿeಠಿoಡಿಣ ಪರಿಶೀಲಿಸಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿ ತಿಂಗಳು 1-2 ದಿನದಲ್ಲಿ ಮಾತ್ರ ಅಕ್ಕಿ ವಿತರಿಸುತ್ತಾರೆ. ಕೂಲಿಕಾರರು, ಮಹಿಳೆಯರು, ವೃದ್ಧರು, ಅಂಗವಿಕಲರು 5-6 ಗಂಟೆ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯುವಂತೆ ಮಾಡುತ್ತಾರೆ. ಅಲ್ಲದೆ ಪಡಿತರ ಪಡೆಯಲು ಬಂದವರನ್ನು ಕಟ್ಟಿಕೊಂಡು ಬೆದರಿಸಿ, ಮುಖಂಡರನ್ನು ಏಕವಚನದಲ್ಲಿ ನಿಂದಿಸಿ, ಹೆದರಿಸುತ್ತಾರೆ ಅಲ್ಲದೆ ಅನ್ಯಾಯವನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರೈತ ಸಂಘ, ದಲಿತ ಸಂಘ ಮತ್ತು ಊರಿನ ಪ್ರಮುಖರು ಸೇರಿದಂತೆ 9 ಜನರ ಮೇಲೆ ಅಂಗವಿಕಲರು, ವೃದ್ಧರು, ಗರ್ಭಿಣಿ ಹೆಣ್ಣು ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ಬಂದವರನ್ನು 5-6 ಗಂಟೆ ನಿಲ್ಲಿಸಿ, ಕೇಳಿದವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಗ್ರಾಮದಲ್ಲಿ ಅತೀ ಹೆಚ್ಚು ಕೂಲಿಯಿಂದಲೇ ಜೀವನ ಸಾಗಿಸುತ್ತಿದ್ದು, ಬೆಳಿಗ್ಗೆ 5 ಗಂಟೆಗೆ ಎದ್ದು ಕೆಲಸಕ್ಕೆ ಹೋಗಿ ರಾತ್ರಿ ಮನೆ ಸೇರುವ 95 ರಷ್ಟು ಎಸ್.ಸಿ, ಎಸ್.ಟಿ ಬಡವರಿದ್ದಾರೆ. ಆದರೂ ಬಂಡವಾಳ ಮಾಡಿಕೊಂಡಿರುವ ಮಾಲೀಕನ ಮಗ “ನಾನು ವಕೀಲ, ನಿಮ್ಮನ್ನು ನನ್ನ ವಿರುದ್ಧ ಕಾನೂನು ಕೇಳುವವರನ್ನು ಮುಗಿಸುತ್ತೇನೆ” ಎಂದು ಗದರಿಸುತ್ತಾನೆ ತಾವುಗಳು ಅಂಗಡಿಯ ಮಾಲಿಕನಾಗಿ ಕಾನೂನು ಹೇಳುವ ಸಚಿನ್ ಕುಮಾರ್ ಪಡಿತರ ಗ್ರಾಹಕರಿಗೆ ಮಾಡಿರುವ ಮೋಸ, ವಂಚನೆ, ಕಾನೂನು ಉಲ್ಲಂಘಿಸಿ ಈವರೆಗೂ ಆಹಾರ ವಿತರಿಸಿರುವ ದಾಖಲೆ, ಅಂಗಡಿಯ ಸಿ.ಸಿ.ಟಿವಿ ಕ್ಯಾಮರಾ ದಾಖಲೆಗಳನ್ನು ಅಧಿಕಾರಿಗಳಿಂದ ಮಾಹಿತಿ ಕೂಡಿಕರಿಸಿ ಕಾನೂನು ಕ್ರಮ ತೆಗೆದುಕೊಂಡು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ನೆಮ್ಮದಿ ಬದುಕು ಕಲ್ಪಿಸಬೇಕು ಎಂದು ವಿನಂತಿಸಿದ್ದಾರೆ.










