ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಅ. 03 : ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಗಣೇಶೋತ್ಸವವು ಈ ವರ್ಷ ಯಶಸ್ವಿ ಯಾಗಿ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇದು ಕೇವಲ ಧಾರ್ಮಿಕ ಕಾರ್ಯ ಕ್ರಮವಾಗಿರದೆ, ದೇಶದ ಯುವ ಜನತೆಯಲ್ಲಿ ಉತ್ಸಾಹ ಮತ್ತು ಚೈತನ್ಯವನ್ನು ತುಂಬುವ ಸಾಮಾಜಿಕ ಹಾಗೂ ರಾಷ್ಟ್ರೀಯ ಕಾರ್ಯ ಕ್ರಮವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್ ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ `ಹಿಂದೂ ಮಹಾಗಣಪತಿ ಮಹೋತ್ಸವ’ದ ಅಂಗವಾಗಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮುಖ್ಯಭಾಷಣಕಾರರಾಗಿ ಮಾತನಾ ಡಿದ ಅವರು, ಗಣೇಶ ಮತ್ತು ಹನುಮಂತ ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರದೆ, ಸಮಸ್ತ ಸಮಾಜವನ್ನು ಒಗ್ಗೂಡಿಸುವ ಸಂಕೇತವಾಗಿದ್ದಾರೆ. ದೇಶದಾದ್ಯಂತ ಸಂಭವಿಸುತ್ತಿರುವ ವೈಚಾರಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆಗಳನ್ನು ಉಲ್ಲೇಖಿಸಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿರುವುದು ಭಾರತದ ಸ್ವಾಭಿಮಾನದ ಜಾಗೃತಿಗೆ ಸಾಕ್ಷಿಯಾಗಿದೆ ಎಂದರು.
ಈ ಬದಲಾವಣೆಯು ದೇಶದಾದ್ಯಂತ ವ್ಯಾಪಿಸುತ್ತಿದ್ದರೂ, ಕರ್ನಾಟಕದಲ್ಲಿ ಇನ್ನು ಸೂಕ್ತ ರೀತಿಯಲ್ಲಿ ಜಾಗೃತಿ ಯಾಗಬೇಕಿದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ಸರ್ಕಾರದ ಕೆಲ ನಿರ್ಧಾರಗಳನ್ನು ಪರೋಕ್ಷವಾಗಿ ವಿಮರ್ಶಿಸಿದ ಅವರು, ಗಣೇಶೋತ್ಸವ ಮತ್ತು ಶೋಭಾಯಾತ್ರೆಗಳಿಗೆ ಆಡಳಿತಾತ್ಮಕವಾಗಿ ಅನುಮತಿ ಪಡೆಯಲು ಶಾಸಕರು ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಬೇಕಾದ ವಾತಾವರಣ ನಿರ್ಮಾಣ ವಾಗಿರು ವುದನ್ನು ಪ್ರಸ್ತಾಪಿಸಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಕಾನೂನು ಮತ್ತು ನ್ಯಾಯಾಲಯದ ಮೂಲಕವೇ ಇಂತಹ ಕ್ರಮಗಳಿಗೆ ಸೂಕ್ತ ಉತ್ತರ ನೀಡಲಾ ಗುವುದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಸಂಘಟನೆಯು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೀಮಿತವಾಗಿಲ್ಲ ಹಾಗೂ ರಾಷ್ಟ್ರಹಿತವೇ ತಮ್ಮ ಮುಖ್ಯ ಆದ್ಯತೆಯಾಗಿದೆ ಯುವಜನತೆ ಜಾಗೃತರಾಗಿ ಸಮಾಜ ಮತ್ತು ದೇಶದ ಪರವಾಗಿ ಸದಾ ನಿಲ್ಲಬೇಕೆಂದು ಎಂದ ಅವರು ಗಣೇಶೋತ್ಸವವು ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ರಾಷ್ಟ್ರೀಯ ಜಾಗೃತಿಯ ಸಂಕೇತವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಸಾಂಸ್ಕೃತಿಕ ಹಕ್ಕುಗಳು ಹಾಗೂ ರಾಷ್ಟ್ರಹಿತಕ್ಕಾಗಿ ಜಾಗೃತನಾಗಿರಬೇಕು ಎಂದು ಕರೆ ನೀಡಿದರು.
ಶೋಭಾಯಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಮಾತನಾಡಿ ದೇಶದಲ್ಲಿ ಜಾತಿ, ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬದಿಗಿಟ್ಟು ಹಿಂದೂ ಬಾಂಧವರೆಲ್ಲರೂ ಒಂದಾಗುವಂತಹ ಭಾವನೆಯನ್ನು ಮೂಡಿಸುವಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ. ಲೋಕಮಾನ್ಯ ತಿಲಕರು ದೇಶದಲ್ಲಿ ಸಂಘಟನಾತ್ಮಕ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು, ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ವೇಗವನ್ನು ನೀಡಿತು ಅದೇ ಪರಂಪರೆಯಂತೆ ಚಿತ್ರದುರ್ಗದಲ್ಲೂ ಕಳೆದ 19 ವರ್ಷಗಳಿಂದ ನಿರಂತರವಾಗಿ ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯುತ್ತಿದ್ದು, ಇದು ದೇಶದಲ್ಲೇ ಎರಡನೇ ಅತಿ ದೊಡ್ಡ ಗಣೇಶೋತ್ಸವ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ದೇಶದ ಭದ್ರತೆ ಹಾಗೂ ಆಧುನಿಕ ಸವಾಲುಗಳ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ವಿಮಾನ ಆಕ್ರಮಣ ಯತ್ನದಂತಹ ಘಟನೆಗಳು ಹಾಗೂ ಪುಲ್ವಾಮಾ ದಾಳಿಯಂತಹ ಸಂದರ್ಭಗಳಲ್ಲಿ ಭಾರತೀಯ ಯೋಧರು ಮತ್ತು ಪೈಲಟ್ಗಳ ಸಮಯಪ್ರಜ್ಞೆ, ಧೈರ್ಯ ಹಾಗೂ ಸಾಮಥ್ರ್ಯದಿಂದ ದೊಡ್ಡ ಅನಾಹುತಗಳು ತಪ್ಪಿ ಸಾರ್ವಜನಿಕರ ಜೀವ ಉಳಿದಿದೆ ಎಂದು ಶ್ಲಾಘಿಸಿದ ಅವರು ಇಂತಹ ಸವಾಲುಗಳ ನಡುವೆ ಹಿಂದೂ ಸಮಾಜವು ಧರ್ಮ, ದೇಶ ಮತ್ತು ಸಮಾಜದ ರಕ್ಷಣೆಗಾಗಿ ಒಗ್ಗಟ್ಟಿನಿಂದ ನಿಲ್ಲಬೇಕಾದ ಅಗತ್ಯವಿದೆ ಅಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಜರಂಗದಳದಂತಹ ಸಂಘಟನೆಗಳು ದೇಶಭಕ್ತಿ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನಿರತವಾಗಿವೆ ಗಣೇಶೋತ್ಸವವು ಮೂರು ದಿನಗಳ ಆರಾಧನೆ, ಪೂಜೆ ಹಾಗೂ ವಿಸರ್ಜನೆಯ ನಡುವೆ ಸಮಾಜಕ್ಕೆ ಧರ್ಮ ಮತ್ತು ದೇಶಕ್ಕೋಸ್ಕರ ಬಾಳಬೇಕೆಂಬ ಮಹತ್ಸಂದೇಶ ನೀಡುತ್ತದೆ ಎಂದರು.
ವೇದಿಕೆಯಲ್ಲಿ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಮಾದಾರ ಚನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ, ಕುಂಚಿಟಗ ಮಹಾ ಸಂಸ್ಥಾನದ ಡಾ.ಶ್ರೀ ಶಾಂತವೀರ ಶ್ರೀಗಳು, ಭೋವಿ ಗುರು ಪೀಠಸ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಯಾದವ ಮಹಾ ಸಂಸ್ಥಾನದ ಕೃಷ್ಣ ಯಾದವಾ ನಂದ ಶ್ರೀಗಳು, ಭಗೀರಥ ಪೀಠದ ಪುರೋತ್ತಮಾನಂದಪುರಿ ಶ್ರೀಗಳು, ಲಂಬಾಣಿ ಗುರುಫೀಠದ ಸೇವಾ ಲಾಲ್ ಶ್ರೀಗಳು, ಸೇರಿದಂತೆ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು, ಸಂಸದರಾದ ಗೋವಿಂದ ಕಾರ ಜೋಳ, ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವಿರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಸಿ.ಟಿ.ರವಿ. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಶ್ವ ಹಿಂದೂ ಪರಿಷದ್ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಬಜರಂಗದಳದ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ್ ಪ್ರಭಂಜನ್ ಸೂರ್ಯ, ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷರಾದ ಜಿ.ಆರ್.ಸುದೀರ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಉಪಾಧ್ಯಕ್ಷರಾದ ಅಶೋಕ್ ಕುಮಾರ್, ಸಲಹಾ ಸಮಿತಿ ಸದಸ್ಯರಾದ ಶರಣ್ ಕುಮಾರ್, ಜಿ.ಎಂ.ಸುರೇಶ್, ಸಂದೀಪ್, ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿಯ ಧ್ವಜ, ಹಾರ, ಎಲ್ಲಕ್ಕಿ ಹಾರ ಲಡ್ಡು, ತೂಗು ಗಣಪತಿ ಗಣಪತಿ ಪೋಟೋ ಹಾಗೂ ಹಣ್ಣನ ಪುಟ್ಟಿಯನ್ನು ಹರಾಜು ಹಾಕಲಾಯಿತು. ಇದರಲ್ಲಿ ಗಣಪತಿಯ ಧ್ವಜವನ್ನು 4 ಲಕ್ಷಕ್ಕೆ ಬಿಜೆಪಿ ಮುಖಂಡರಾದ ಹನುಮಂತೇಗೌಡ, ಗಣಪತಿ ಹಾರವನ್ನು 1.30 ಲಕ್ಷಕ್ಕೆ ಲವಕುಮಾರ, ಗಣಪತಿಯ ಲಡ್ಡು ಮಧುರವರಿಗೆ 60ಸಾವಿರ, ಏಲಕ್ಕಿ ಹಾರವನ್ನು ಅಧ್ಯಕ್ಷರಾದ ಸುಧೀರ ರವರು 50 ಸಾವಿರ, ಗಣಪತಿಯ ಚಿತ್ರಪಟ 50 ಸಾವಿರಕ್ಕೆ ಮಂಜಣ್ಣರವರು ಪಡೆದರೆ, ಉಯ್ಯಾಲೆ ಗಣಪತಿಯನ್ನು ಪಲ್ಲವಿ ಪ್ರಸನ್ನ ರವರು 1.30 ಲಕ್ಷಕ್ಕೆ ಹಾಗೂ ಗಣಪತಿಯ ಹಣ್ಣಿನ ಪುಟ್ಟಿಯನ್ನು 1.10ಕ್ಕೆ ಚಳ್ಳಕೆರೆಯ ಡಾ.ಮಂಜುನಾಥ್ ಪಡೆದರು.













