ಸುದ್ದಿಒನ್, ಚಿತ್ರದುರ್ಗ, ಅ. 02: ವನ್ಯಜೀವಿಗಳು ಕೇವಲ ಅರಣ್ಯದ ಸಂಪತ್ತಲ್ಲ; ಅವು ಪ್ರಕೃತಿಯ ಸಮತೋಲನದ ಅವಿಭಾಜ್ಯ ಅಂಗ. ಒಂದು ಜೀವಿ ನಾಶವಾದರೂ ಅದರ ಪರಿಣಾಮ ಇಡೀ ಪರಿಸರ ವ್ಯವಸ್ಥೆಯ ಮೇಲೆ ಬೀರುತ್ತದೆ. ಆದ್ದರಿಂದ ವನ್ಯಜೀವಿಗಳ ಸಂರಕ್ಷಣೆ ಸರ್ಕಾರ ಅಥವಾ ಅರಣ್ಯ ಇಲಾಖೆಯೊಂದರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಅರಣ್ಯ ಇಲಾಖೆಯ ವತಿಯಿಂದ 72ನೇ ವನ್ಯಜೀವಿ ಸಪ್ತಾಹ – 2026ರ ಅಂಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಚಿತ್ರದುರ್ಗ ವಿಭಾಗದ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪನ್ಯಾಸಕ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು, ಅರಣ್ಯಗಳು ಮನುಷ್ಯನಿಗೆ ಆಮ್ಲಜನಕ, ನೀರು, ಆಹಾರ, ಔಷಧೀಯ ಸಂಪನ್ಮೂಲ ಹಾಗೂ ಜೀವಿಸುವ ಪರಿಸರವನ್ನು ಒದಗಿಸುತ್ತವೆ. ಕಾಡು ಉಳಿದರೆ ಮಾತ್ರ ವನ್ಯಜೀವಿಗಳು ಉಳಿಯುತ್ತವೆ. ವನ್ಯಜೀವಿಗಳು ಉಳಿದರೆ ಮಾತ್ರ ಪರಿಸರದ ಸಮತೋಲನ ಕಾಪಾಡಲು ಸಾಧ್ಯ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಅತಿಯಾಗಿ ಹಾಳು ಮಾಡದೆ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಸೇರಿದಂತೆ ಅರಣ್ಯ ಪ್ರದೇಶಗಳು ಅಪಾರ ಜೀವವೈವಿಧ್ಯವನ್ನು ಹೊಂದಿದ್ದು, ಅವುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಮಕ್ಕಳು ಮತ್ತು ಯುವಜನರಲ್ಲಿ ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಪ್ರೀತಿ ಮತ್ತು ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಇಂದಿನ ಮಕ್ಕಳು ನಾಳೆಯ ಪರಿಸರ ಸಂರಕ್ಷಕರು. ಅವರಿಗೆ ಪ್ರಕೃತಿಯ ಮಹತ್ವವನ್ನು ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಶಾಲಾ-ಕಾಲೇಜುಗಳಲ್ಲಿ ಪರಿಸರ ಶಿಕ್ಷಣ ಮತ್ತು ವನ್ಯಜೀವಿ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ರೋಟರಿ ಕ್ಲಬ್ ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಸಹಕಾರ ನೀಡುತ್ತಿದ್ದು ಅರಣ್ಯ ಇಲಾಖೆ ಕೈಗೊಳ್ಳುವ ಜನಜಾಗೃತಿ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡಲು ರೋಟರಿ ಸಿದ್ಧವಿದೆ ಎಂದು ಚಿತ್ರದುರ್ಗ ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿತ್ರದುರ್ಗ ವಿಭಾಗದ ಅರಣ್ಯ ವಲಯಾಧಿಕಾರಿ ವಸಂತ್ ಕುಮಾರ್ ಅವರು ವನ್ಯಜೀವಿ ಸಪ್ತಾಹದ ಉದ್ದೇಶ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯತೆಯ ಕುರಿತು ವಿವರಿಸಿದರು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಅ.2ರಿಂದ ಅ.8ರವರೆಗೆ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ವನ್ಯಜೀವಿಗಳ ವಾಸಸ್ಥಳಗಳನ್ನು ಸಂರಕ್ಷಿಸುವುದು, ಅಕ್ರಮ ಬೇಟೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟುವುದು, ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸುವುದು ಹಾಗೂ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಿಂದ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಅರಣ್ಯದೊಳಗೆ ಪ್ರವಾಸಿಗರು ನಿಯಮಗಳನ್ನು ಪಾಲಿಸುವ ಮೂಲಕವೂ ವನ್ಯಜೀವಿ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡಬಹುದು ಎಂದರು. ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಕಾಡು ಮತ್ತು ವನ್ಯಜೀವಿಗಳನ್ನು ಉಳಿಸುವುದು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದಾದ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸ್ಪೀಚ್ ಸಂಸ್ಥೆಯ ಶೇಷಣ್ಣ ಅವರು ವನ್ಯಜೀವಿ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಸಮಾಜದ ಪ್ರತಿಯೊಬ್ಬರೂ ಪ್ರಕೃತಿ ಸಂರಕ್ಷಣೆಯಲ್ಲಿ ಕೈಜೋಡಿಸುವ ಅಗತ್ಯದ ಕುರಿತು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.2ರಿಂದ ಅ.8ರವರೆಗೆ ನಡೆಯಲಿರುವ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಜಾಗೃತಿ ಹಾಗೂ ಪರಿಸರ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.










