ದೆಹಲಿ.ಅಕ್ಟೋಬರ್.01 : ಸೆಪ್ಟೆಂಬರ್ ತಿಂಗಳು ಮುಗಿದು ಅಕ್ಟೋಬರ್ ಆರಂಭವಾಗುತ್ತಿದ್ದಂತೆ, ಇಂದಿನಿಂದ ದೇಶದಲ್ಲಿ ಹಲವು ಪ್ರಮುಖ ನಿಯಮಗಳು ಜಾರಿಗೆ ಬಂದಿವೆ. ಅಡುಗೆ ಅನಿಲ ಸಿಲಿಂಡರ್ ದರಗಳಿಂದ ಹಿಡಿದು ಬ್ಯಾಂಕಿಂಗ್ ನಿಯಮಗಳು, ಎಲೆಕ್ಟ್ರಾನಿಕ್ಸ್ ಬೆಲೆಗಳವರೆಗೆ ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ಪ್ರಭಾವ ಬೀರುವ 10 ಮಹತ್ವದ ಬದಲಾವಣೆಗಳ ವಿವರ ಇಲ್ಲಿದೆ.
ಎಲ್ ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನದಂತೆ ತೈಲ ಕಂಪನಿಗಳು ಇಂದಿನಿಂದ ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸಿವೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರಗಳಲ್ಲಿ ಆಗಾಗ ಏರಿಳಿತಗಳು ಕಂಡುಬರುತ್ತಿದ್ದು, 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ದರಗಳು ಬಹುತೇಕ ಸ್ಥಿರವಾಗಿವೆ. ಸದ್ಯ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ಹೊಸ ಪರಿಷ್ಕೃತ ದರಗಳು ಇಂದಿನಿಂದಲೇ ಅನ್ವಯವಾಗಲಿವೆ.
ಎಲ್ ಪಿಜಿ ಸಬ್ಸಿಡಿಗೆ ಇ-ಕೆವೈಸಿ ಕಡ್ಡಾಯ
ಗೃಹಬಳಕೆಯ ಸಿಲಿಂಡರ್ಗಳಿಗೆ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಹೊಸ ನಿಯಮ ಜಾರಿಯಾಗಿದೆ. ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗಲು ಆಧಾರ್ ಬಯೋಮೆಟ್ರಿಕ್ ಪರಿಶೀಲನೆ ಅಥವಾ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸುವುದು ಇಂದಿನಿಂದ ಕಡ್ಡಾಯವಾಗಿದೆ. ಈಗಾಗಲೇ ಈ ಪ್ರಕ್ರಿಯೆ ಮುಗಿಸಿದ ಗ್ರಾಹಕರು ಮತ್ತೆ ಮಾಡಿಸುವ ಅಗತ್ಯವಿಲ್ಲ.
ಒಟಿಪಿ ಆಧಾರಿತ ಸಿಲಿಂಡರ್ ವಿತರಣೆ
ಇಂದಿನಿಂದ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಯಾಗಿದೆ. ಸಿಲಿಂಡರ್ ಡೆಲಿವರಿ ಪಡೆಯುವ ಸಮಯದಲ್ಲಿ ಕೇವಲ ರಶೀದಿ ಸಾಕಾಗುವುದಿಲ್ಲ; ಬದಲಾಗಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಪರಿಶೀಲನೆ ಕಡ್ಡಾಯವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಗ್ರಾಹಕರಿಗೆ ಸಿಲಿಂಡರ್ ಹಸ್ತಾಂತರಿಸಲಾಗುತ್ತದೆ.
ವಿಮಾನ ಇಂಧನ ದರ ಬದಲಾವಣೆ
ವಿಮಾನಯಾನ ಇಂಧನ ಅಥವಾ ಏರ್ ಟರ್ಬೈನ್ ಫ್ಯೂಯಲ್ (ATF) ದರಗಳನ್ನು ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಪರಿಷ್ಕರಿಸಿವೆ. ಇಂಧನ ಬೆಲೆಯಲ್ಲಿ ಆಗುವ ಏರಿಳಿತಗಳು ವಿಮಾನ ಪ್ರಯಾಣಿಕರ ಟಿಕೆಟ್ ದರಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ವಿವಿಧ ಮೆಟ್ರೋ ನಗರಗಳಲ್ಲಿ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ.
ಎಸ್ ಬಿಐ ಎಟಿಎಂ ನಿಯಮ ಹಾಗೂ ಶುಲ್ಕ ಏರಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಇಂದಿನಿಂದ ನಗದು ಹಿಂಪಡೆಯುವಿಕೆ ನಿಯಮಗಳು ಬದಲಾಗಿವೆ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಖಾತೆದಾರರಿಗೆ ತಿಂಗಳಿಗೆ 4 ಉಚಿತ ಎಟಿಎಂ ವಿತ್ಡ್ರಾವಲ್ ಮೀರಿದರೆ ಪ್ರತಿ ವಹಿವಾಟಿಗೆ 15 ರೂ. ಜತೆಗೆ ಜಿಎಸ್ಟಿ ಶುಲ್ಕ ಬೀಳಲಿದೆ. ಇನ್ನು ಸ್ಯಾಲರಿ ಖಾತೆದಾರರ ಮಾಸಿಕ ಉಚಿತ ಮಿತಿಯನ್ನು 10 ರಿಂದ 5ಕ್ಕೆ ಇಳಿಸಲಾಗಿದ್ದು, 6ನೇ ವಹಿವಾಟಿನಿಂದ 23 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಹಣಕಾಸೇತರ ವಹಿವಾಟುಗಳಿಗೆ 11 ರೂ. ಜತೆಗೆ ಜಿಎಸ್ಟಿ ಶುಲ್ಕ ಅನ್ವಯವಾಗಲಿದೆ.
ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ನಿಯಮಗಳಲ್ಲಿ ಬದಲಾವಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ಹೊಸ ಎಫ್ಡಿ ನಿಯಮಗಳು ಇಂದಿನಿಂದ ಜಾರಿಗೆ ಬಂದಿವೆ. ಬ್ಯಾಂಕುಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ತಮ್ಮ ವೆಬ್ಸೈಟ್ಗಳಲ್ಲಿ ಪರಿಷ್ಕೃತ ಬಡ್ಡಿದರಗಳನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಜತೆಗೆ, ಒಂದೇ ದಿನದಲ್ಲಿ ಸ್ವೀಕರಿಸುವ ಠೇವಣಿಗಳಿಗೆ ಯಾವುದೇ ತಾರತಮ್ಯವಿಲ್ಲದೆ ಏಕರೂಪದ ಬಡ್ಡಿದರ ನೀಡಬೇಕು ಹಾಗೂ ಬಲ್ಕ್ ಡಿಪಾಸಿಟ್ಗಳಿಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆ ತರಲಾಗಿದೆ.
ಎನ್ ಆರ್ ಐ ಆಸ್ತಿ ಖರೀದಿ ಪ್ರಕ್ರಿಯೆ ಸರಳ
ಅನಿವಾಸಿ ಭಾರತೀಯರಿಂದ (NRI) ಆಸ್ತಿ ಖರೀದಿಸುವ ಭಾರತೀಯರಿಗೆ ಆದಾಯ ತೆರಿಗೆ ಇಲಾಖೆ ಇಂದಿನಿಂದ ಟಿಡಿಎಸ್ (TDS) ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇನ್ಮುಂದೆ ಪ್ರತ್ಯೇಕವಾಗಿ ಟಿಡಿಎಸ್ ಕಡಿತಗೊಳಿಸಿ ಕಷ್ಟಪಟ್ಟು ಫೈಲ್ ಮಾಡುವ ಬದಲು, ಖರೀದಿದಾರರು ತಮ್ಮ ಪ್ಯಾನ್ (PAN) ಕಾರ್ಡ್ ಬಳಸಿಯೇ ಟಿಡಿಎಸ್ ಕಡಿತ ಮಾಡಿ ಜಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಜನನ ಮತ್ತು ಮರಣ ಪ್ರಮಾಣಪತ್ರ ನಿಯಮ ಬಿಗಿ
ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಗಳಲ್ಲಿ ವಿಳಂಬ ಮಾಡುವುದನ್ನು ತಡೆಯಲು ಇಂದಿನಿಂದ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಘಟನೆ ನಡೆದ 21 ದಿನಗಳ ಗಡುವಿನ ನಂತರ ತಡವಾಗಿ ನೋಂದಣಿ ಮಾಡಿಸಿದರೆ ಕಠಿಣ ದಂಡ ವಿಧಿಸಲಾಗುತ್ತದೆ ಹಾಗೂ ಕಾಲಮಿತಿ ಮೀರಿದ ನೋಂದಣಿಗೆ ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಲಿದೆ.
ಟಿವಿ, ಫ್ರಿಡ್ಜ್, ಎಸಿ ಬೆಲೆ ಏರಿಕೆ
ಹಬ್ಬದ ಸೀಸನ್ ಆರಂಭದಲ್ಲೇ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ತಾಮ್ರ, ಉಕ್ಕು, ಅಲ್ಯೂಮಿನಿಯಂ ಹಾಗೂ ಕಚ್ಚಾ ತೈಲದಂತಹ ಕಚ್ಚಾವಸ್ತುಗಳ ಬೆಲೆ ಮತ್ತು ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಟಿವಿ, ರೆಫ್ರಿಜರೇಟರ್ ಮತ್ತು ಏರ್ ಕಂಡಿಷನರ್ಗಳ ಬೆಲೆ ಇಂದಿನಿಂದ ಶೇ. 8 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಈ ತಿಂಗಳು ಬ್ಯಾಂಕುಗಳಿಗೆ 16 ದಿನ ರಜೆ
ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳಿದ್ದರೆ ಗ್ರಾಹಕರು ಆರ್ಬಿಐ ರಜಾ ಪಟ್ಟಿಯನ್ನು ಗಮನಿಸುವುದು ಒಳಿತು. ದಸರಾ, ಗಾಂಧಿ ಜಯಂತಿ ಹಾಗೂ ಸಾಪ್ತಾಹಿಕ ರಜೆಗಳು ಸೇರಿದಂತೆ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಲಿವೆ. ಆದಾಗ್ಯೂ, ಆನ್ಲೈನ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ನಿರಂತರವಾಗಿ ಲಭ್ಯವಿರುತ್ತವೆ.















