ಹೃದಯವನ್ನು ಆರೋಗ್ಯವಾಗಿಡಲು ಸಾಮಾನ್ಯವಾಗಿ ಪೌಷ್ಟಿಕ ಆಹಾರ, ವ್ಯಾಯಾಮ, ಧೂಮಪಾನದಿಂದ ದೂರವಿರುವುದು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಆದರೆ ಇಂದಿನ ವೇಗದ ನಗರೀಕರಣದ ಬದುಕಿನಲ್ಲಿ ಸುದೀರ್ಘ ಕೆಲಸದ ಅವಧಿ, ನಿರಂತರ ಮಾನಸಿಕ ಒತ್ತಡ, ನಿದ್ರೆಯ ಕೊರತೆ ಮತ್ತು ಗಂಟೆಗಟ್ಟಲೆ ಕುಳಿತಲ್ಲೇ ಕೆಲಸ ಮಾಡುವ ಅಭ್ಯಾಸಗಳು ಹೃದಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಡಯಟ್ ಅಥವಾ ವ್ಯಾಯಾಮ ಮಾತ್ರವಲ್ಲದೆ, ಇಡೀ ದಿನಚರಿಯನ್ನೇ ಸುಧಾರಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ಹೊಂದಿರುವವರು ಒತ್ತಡ ಹಾಗೂ ನಿದ್ರಾಹೀನತೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ. ದಿನದಲ್ಲಿ ಕೇವಲ ಒಂದು ಬಾರಿ ವ್ಯಾಯಾಮ ಮಾಡುವುದರ ಬದಲು, ಜೀವನಶೈಲಿಯಲ್ಲಿ ಸರಳ ಬದಲಾವಣೆಗಳನ್ನು ತರಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.
ದೀರ್ಘಕಾಲದ ಮಾನಸಿಕ ಒತ್ತಡ ಹೃದಯಕ್ಕೆ ಕುತ್ತು
ಹೃದಯದ ಆರೋಗ್ಯವನ್ನು ಕೇವಲ ಕೊಲೆಸ್ಟ್ರಾಲ್ ಪರೀಕ್ಷೆಯ ವರದಿಗೆ ಸೀಮಿತಗೊಳಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಿರಂತರ ಒತ್ತಡ, ಅಪೂರ್ಣ ನಿದ್ರೆ ಮತ್ತು ದಿನವಿಡೀ ಕುಳಿತುಕೊಳ್ಳುವ ಜೀವನಶೈಲಿ ಹೃದಯಕ್ಕೆ ಪೂರಕವಲ್ಲ. ಮಾನಸಿಕ ಒತ್ತಡವು ರಕ್ತದೊತ್ತಡ ಮತ್ತು ದೈನಂದಿನ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರುವುದರಿಂದ, ಇಂತಹ ಅಭ್ಯಾಸಗಳನ್ನು ಸಕಾಲದಲ್ಲಿ ಗುರುತಿಸಿ ಬದಲಾಯಿಸಿಕೊಳ್ಳುವುದು ಮುಖ್ಯವಾಗಿದೆ.
ಕೆಲಸದ ಒತ್ತಡದಲ್ಲಿ ನಿದ್ರೆಗೆ ಬೀಳದಿರಲಿ ಕತ್ತರಿ
ಹೃದ್ರೋಗ ತಡೆಗಟ್ಟುವಲ್ಲಿ ಗುಣಮಟ್ಟದ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ನಿದ್ರೆ ಮಾಡದವರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುವುದು ಮತ್ತು ಜಂಕ್ ಫುಡ್ ಸೇವಿಸುವ ಪ್ರವೃತ್ತಿ ಹೆಚ್ಚಾಗುವುದು ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವವರು ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಕೇವಲ ಒಂದು ಬದಲಾವಣೆಯಿಂದ ಫಲಿತಾಂಶ ಸಿಗದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಮತ್ತು ನಿಯಮಿತ ಚಟುವಟಿಕೆ ಎರಡನ್ನೂ ದಿನಚರಿಯ ಭಾಗವಾಗಿಸಿಕೊಳ್ಳಬೇಕು.
ದಿನವಿಡೀ ಕುಳಿತುಕೊಳ್ಳುವ ಅಭ್ಯಾಸದಿಂದ ಹೆಚ್ಚುತ್ತಿದೆ ಸಂಕಷ್ಟ
ದೆಹಲಿಯ ಶ್ರೀ ಬಾಲಾಜಿ ಆ್ಯಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಹೃದ್ರೋಗ ವಿಭಾಗದ ನಿರ್ದೇಶಕ ಡಾ. ಅಮರ್ ಸಿಂಘಾಲ್ ಅವರ ಪ್ರಕಾರ, ದಿನಕ್ಕೆ ಒಂದು ಗಂಟೆ ಜಿಮ್‌ಗೆ ಹೋದ ತಕ್ಷಣ ಇಡೀ ದಿನ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಆಗುವ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಕೆಲಸದ ಮಧ್ಯೆ ಸಣ್ಣ ವಿರಾಮ ತೆಗೆದುಕೊಂಡು ನಡೆಯುವುದು, ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಮತ್ತು ಅತಿಯಾದ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು ಹೃದಯದ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ.
ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮುಖ್ಯ
ದೆಹಲಿಯ ಮೆಟ್ರೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿಜಯ್ ಕುಮಾರ್ ಬಹಲ್ ಅವರು, ರೋಗ ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದೆ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಜಾಣತನ ಎಂದಿದ್ದಾರೆ. ಎದೆನೋವಿನಂತಹ ತೀವ್ರ ಲಕ್ಷಣಗಳು ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು, ದಿನನಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಬೇಕು. ಸಕಾಲದಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಆರೋಗ್ಯಕರ ಬದಲಾವಣೆಗಳು ಭವಿಷ್ಯದಲ್ಲಿ ಎದುರಾಗಬಹುದಾದ ಗಂಭೀರ ಹೃದಯ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತವೆ.
ದೊಡ್ಡ ತ್ಯಾಗಗಳಲ್ಲ, ಸಣ್ಣ ಬದಲಾವಣೆಗಳೇ ಸಾಕು
ಹೃದಯವನ್ನು ರಕ್ಷಿಸಿಕೊಳ್ಳಲು ಜೀವನಶೈಲಿಯಲ್ಲಿ ಆಮೂಲಾಗ್ರ ಅಥವಾ ಕಷ್ಟಕರವಾದ ಬದಲಾವಣೆಗಳ ಅಗತ್ಯವಿಲ್ಲ. ಸಮತೋಲಿತ ಆಹಾರ, ತಕ್ಕಮಟ್ಟಿನ ವ್ಯಾಯಾಮ, ಗಾಢ ನಿದ್ರೆ ಮತ್ತು ದುಶ್ಚಟಗಳಿಂದ ದೂರವಿರುವುದು ಹೃದಯವನ್ನು ಸುಸ್ಥಿತಿಯಲ್ಲಿಡಲು ಸಾಕು. ಹೃದಯದ ಆರೋಗ್ಯವು ಆಸ್ಪತ್ರೆಯ ಪರೀಕ್ಷೆಗಳಿಂದಷ್ಟೇ ನಿರ್ಧಾರವಾಗುವುದಿಲ್ಲ, ಬದಲಿಗೆ ಕಚೇರಿ ಮತ್ತು ಮನೆಯಲ್ಲಿ ನಾವು ಅನುಸರಿಸುವ ದೈನಂದಿನ ಅಭ್ಯಾಸಗಳ ಮೇಲೆ ನಿಂತಿದೆ ಎಂಬುದೇ ಈ ವಿಶ್ವ ಹೃದಯ ದಿನದ ಪ್ರಮುಖ ಸಂದೇಶವಾಗಿದೆ.













