ದೆಹಲಿ : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಅನಿವಾರ್ಯವಾಗಿದೆ. ದೈನಂದಿನ ಹಣಕಾಸು ವ್ಯವಹಾರಗಳು, ಸರ್ಕಾರದ ಸವಲತ್ತುಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಖಾತೆ ಇರಲೇಬೇಕು.
ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆದರೆ ಖಾತೆದಾರ ಅನಿರೀಕ್ಷಿತವಾಗಿ ಮೃತಪಟ್ಟರೆ ಆತನ ಖಾತೆಯಲ್ಲಿರುವ ಹಣ ಏನಾಗುತ್ತದೆ ಎಂಬ ಆತಂಕ ಹಾಗೂ ಗೊಂದಲ ಹಲವರಲ್ಲಿರುತ್ತದೆ. ಖಾತೆದಾರ ತೀರಿಕೊಂಡರೆ ಹಣ ಬ್ಯಾಂಕಿನಲ್ಲೇ ಉಳಿಯುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ತಪ್ಪು ಕಲ್ಪನೆ. ಮೃತರ ಕುಟುಂಬ ಸದಸ್ಯರು ಅಥವಾ ನಾಮಿನಿ ಆ ಹಣವನ್ನು ಸುಲಭವಾಗಿ ಹಿಂಪಡೆಯಬಹುದು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ದೇಶನ ನೀಡಿದೆ.
ಮೃತರ ಖಾತೆಯ ಹಣ ಕ್ಲೈಮ್ ಮಾಡಲು ಮೂರು ಸರಳ ಹಂತಗಳು
ಮೃತ ಖಾತೆದಾರರ ಖಾತೆಯಲ್ಲಿರುವ ಮೊತ್ತವನ್ನು ಅವರ ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರು ಮೂರು ಸರಳ ಹಂತಗಳಲ್ಲಿ ಪಡೆಯಬಹುದು. ಮೊದಲಿಗೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಖುದ್ದಾಗಿ ಭೇಟಿ ನೀಡಬೇಕು ಅಥವಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ತೆರಳಬೇಕು. ಎರಡನೆಯದಾಗಿ, ಅಲ್ಲಿ ನಿಗದಿತ ಕ್ಲೈಮ್ ಅರ್ಜಿಯನ್ನು ಪಡೆದು ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಬೇಕು. ಮೂರನೆಯದಾಗಿ, ಮರಣ ಪ್ರಮಾಣಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಬ್ಯಾಂಕ್ಗೆ ಸಲ್ಲಿಸಬೇಕು. ಬ್ಯಾಂಕ್ ಸಿಬ್ಬಂದಿ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಖಾತೆಯಲ್ಲಿರುವ ಹಣವನ್ನು ಅರ್ಹ ವ್ಯಕ್ತಿಗೆ ಹಸ್ತಾಂತರಿಸುತ್ತಾರೆ.
15 ದಿನಗಳ ಒಳಗಾಗಿ ಹಣ ವಿಲೇವಾರಿ ಕಡ್ಡಾಯ
ಕ್ಲೈಮ್ ಅರ್ಜಿ ಸಲ್ಲಿಕೆಯಾದ ನಂತರ ಬ್ಯಾಂಕುಗಳು ಕಾಲಹರಣ ಮಾಡುವುದನ್ನು ತಡೆಯಲು ಆರ್ಬಿಐ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆಯಾದ ಕೇವಲ 15 ಕ್ಯಾಲೆಂಡರ್ ದಿನಗಳ ಒಳಗಾಗಿ ಕ್ಲೈಮ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಣ ಪಾವತಿಸಬೇಕೆಂದು ಗಡುವು ನಿಗದಿಪಡಿಸಿದೆ.
ಖಾತೆಗೆ ನಾಮಿನಿ ವಿವರ ಜೋಡಿಸುವುದು ಅತಿಮುಖ್ಯ
ಬ್ಯಾಂಕ್ ಖಾತೆಯಲ್ಲಿ ನಾಮಿನಿ ಹೆಸರು ನಮೂದಾಗಿದ್ದರೆ ಕ್ಲೈಮ್ ಪ್ರಕ್ರಿಯೆ ಯಾವುದೇ ಅಡೆತಡೆ ಇಲ್ಲದೆ ಅತ್ಯಂತ ವೇಗವಾಗಿ ಪೂರ್ಣಗೊಳ್ಳುತ್ತದೆ. ಒಂದು ವೇಳೆ ನಾಮಿನಿ ಇಲ್ಲದಿದ್ದರೆ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸಬೇಕಾಗಿ ಬಂದು ಪ್ರಕ್ರಿಯೆ ವಿಳಂಬವಾಗಬಹುದು. ಆದ್ದರಿಂದ ಪ್ರತಿಯೊಬ್ಬ ಖಾತೆದಾರರು ತಮ್ಮ ಬ್ಯಾಂಕ್ ಖಾತೆಗೆ ನಾಮಿನಿ ವಿವರಗಳನ್ನು ತಕ್ಷಣವೇ ಸೇರಿಸಿ, ಅಪ್ಡೇಟ್ ಮಾಡಿಕೊಳ್ಳುವಂತೆ ಆರ್ಬಿಐ ಸಲಹೆ ನೀಡಿದೆ.











