Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ಯಾಕ್ ಮಾಡಿದ ಆಹಾರಗಳಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬು ಹೆಚ್ಚಿದ್ದರೆ ಇನ್ನುಮುಂದೆ ಎಚ್ಚರಿಕೆ ಚಿಹ್ನೆ ಕಡ್ಡಾಯ?

---Advertisement---

ದೆಹಲಿ: ನೀವು ಖರೀದಿಸುವ ಪ್ಯಾಕೇಜ್ಡ್ ಆಹಾರಗಳಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಾಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದರೆ, ಇನ್ನುಮುಂದೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಚಿಹ್ನೆಯನ್ನು ಮುದ್ರಿಸುವುದು ಶೀಘ್ರದಲ್ಲೇ ಕಡ್ಡಾಯವಾಗುವ ಸಾಧ್ಯತೆಯಿದೆ.

ಗ್ರಾಹಕರು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಜಾರಿಗೆ ತರಲು ಉದ್ದೇಶಿಸಿರುವ ‘ಪ್ಯಾಕೆಟ್ ಮುಂಭಾಗದ ಲೇಬಲಿಂಗ್’ ನಿಯಮಗಳ ಜಾರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಸ್ತಾಪಿಸಿರುವ ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಮಹತ್ವದ ವಿಷಯದಲ್ಲಿ ಇಷ್ಟೊಂದು ಸಮಯವನ್ನು ಏಕೆ ವ್ಯರ್ಥ ಮಾಡುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಅಸಮಾಧಾನ ವ್ಯಕ್ತಪಡಿಸಿ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ದೇಶಾದ್ಯಂತ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಕಡ್ಡಾಯವಾಗಿ ಈ ಎಚ್ಚರಿಕೆ ಲೇಬಲ್ ಅಳವಡಿಸಲು ಆದೇಶಿಸಬೇಕೆಂದು ‘3ಎಸ್ ಆ್ಯಂಡ್ ಅವರ್ ಹೆಲ್ತ್ ಸೊಸೈಟಿ’ ಎಂಬ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ. ಈ ಹಿಂದೆ FSSAI ಇದನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ಯೋಜಿಸಿತ್ತು. ಆದರೆ ಆರೋಗ್ಯ ತಜ್ಞರು ಮತ್ತು ಹೋರಾಟಗಾರರಿಂದ ವ್ಯಕ್ತವಾದ ತೀವ್ರ ವಿರೋಧದ ಬಳಿಕ, ತನ್ನ ನಿಲುವನ್ನು ಬದಲಿಸಿ ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದೆ.

ಹೊಸ ಪ್ರಸ್ತಾವನೆಯ ಪ್ರಕಾರ, ಬಿಳಿ ಚೌಕಾಕಾರದ ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಷಡ್ಭುಜಾಕೃತಿಯ (Hexagon) ಎಚ್ಚರಿಕೆ ಚಿಹ್ನೆಯನ್ನು ಪ್ಯಾಕೆಟ್‌ನ ಮುಂಭಾಗದಲ್ಲಿ ಮುದ್ರಿಸಲಾಗುತ್ತದೆ. ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬು—ಈ ಮೂರರಲ್ಲಿ ಯಾವುದಾದರೂ ಒಂದರ ಪ್ರಮಾಣವು ಮಿತಿಯನ್ನು ಮೀರಿದರೂ ಸಹ ಸಂಬಂಧಪಟ್ಟ ಪೋಷಕಾಂಶದ ಹೆಸರಿನೊಂದಿಗೆ ಈ ಕೆಂಪು ಎಚ್ಚರಿಕೆ ಚಿಹ್ನೆ ಪ್ರದರ್ಶಿಸಬೇಕಾಗುತ್ತದೆ. ಇದರ ಜೊತೆಗೆ ಕೃತಕ ಸಿಹಿಕಾರಕಗಳನ್ನು (Artificial Sweeteners) ಬಳಸುವ ಪಾನೀಯಗಳು ಸೇರಿದಂತೆ ಯಾವುದೇ ಆಹಾರ ಉತ್ಪನ್ನಗಳ ಮುಂಭಾಗದಲ್ಲೇ “ಕ್ಯಾಲೋರಿ ರಹಿತ ಸಿಹಿಕಾರಕವನ್ನು ಒಳಗೊಂಡಿದೆ” (CONTAIN NON CALORIC SWEETENER) ಎಂಬ ಎಚ್ಚರಿಕೆ ಸಂದೇಶವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ಪ್ರಸ್ತಾಪಿಸಲಾಗಿದೆ.

ಆದರೆ ಈ ನಿಯಮಗಳನ್ನು ಅಂತಿಮಗೊಳಿಸಲು ನಾಲ್ಕು ತಿಂಗಳು ಮತ್ತು ನಿಯಮ ಜಾರಿಯಾದ ಬಳಿಕ ಆಹಾರ ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ಅನುಸರಿಸಲು ಬರೋಬ್ಬರಿ ಒಂದು ವರ್ಷದ (365 ದಿನಗಳು) ಕಾಲಾವಕಾಶ ನೀಡುವುದಾಗಿ FSSAI ಕೋರ್ಟ್‌ಗೆ ತಿಳಿಸಿದೆ. ಪ್ರಾಧಿಕಾರದ ಈ ನಿಲುವನ್ನು ಕಟುವಾಗಿ ಆಕ್ಷೇಪಿಸಿದ ಸುಪ್ರೀಂ ಕೋರ್ಟ್, “ಜನರ ಹಿತದೃಷ್ಟಿಯಿಂದ ಇಷ್ಟೊಂದು ಸಮಯ ಏಕೆ ಬೇಕು? ಒಂದು ವರ್ಷ ಸ್ವಯಂಪ್ರೇರಿತ ಜಾರಿಯ ಅಗತ್ಯವೇನಿದೆ? 2022ರಿಂದ ಈವರೆಗೆ ಕಳೆದ ನಾಲ್ಕು ವರ್ಷಗಳಲ್ಲಿ ನೀವೇನು ಮಾಡಿದಿರಿ?” ಎಂದು ತರಾಟೆಗೆ ತೆಗೆದುಕೊಂಡಿತು. ಇದಕ್ಕೆ ಉತ್ತರಿಸಿದ FSSAI ಪರ ವಕೀಲರು, 2022ರಲ್ಲಿ ಸ್ಟಾರ್-ರೇಟಿಂಗ್ ವ್ಯವಸ್ಥೆಯನ್ನು ರೂಪಿಸಲಾಗಿತ್ತು, ಆದರೆ ಈಗಿನ ಮಾನದಂಡಗಳು ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ಸಮರ್ಥಿಸಿಕೊಂಡರು. ಸದ್ಯ ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದು, ಶೀಘ್ರದಲ್ಲೇ ಮಹತ್ವದ ಆದೇಶ ಹೊರಬೀಳುವ ನಿರೀಕ್ಷೆಯಿದೆ.

Join WhatsApp

Join Now

Join Telegram

Join Now