ದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ರಾಪ್ತರ ಸುರಕ್ಷತೆಯನ್ನು ಕೇವಲ ಮಾರ್ಗಸೂಚಿಗಳಿಗೆ ಸೀಮಿತಗೊಳಿಸದೆ, ಅದಕ್ಕೊಂದು ಶಾಸನಬದ್ಧ ಚೌಕಟ್ಟು ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ (ಜೆಆರ್‌ಸಿಎ) ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಡಿಜಿಟಲ್ ತಾಣಗಳನ್ನು ಬಳಸುವ ಮಕ್ಕಳ ರಕ್ಷಣೆಗೆ ಬಲವಾದ ಕಾನೂನು ಅಗತ್ಯವಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಅವರು, ಮಕ್ಕಳ ಸುರಕ್ಷತೆಯ ನಿಯಮಗಳು ಕೇವಲ ಮಾರ್ಗದರ್ಶಕ ಸೂತ್ರಗಳಾಗಿ ಉಳಿಯಬಾರದು, ಬದಲಿಗೆ ಮಧ್ಯವರ್ತಿ ನಿಯಮಗಳ (Intermediary Rules) ಅಡಿಯಲ್ಲಿ ಇವುಗಳಿಗೆ ಕಾನೂನುಬದ್ಧ ಸ್ವರೂಪ ನೀಡಬೇಕು ಎಂದು ಸ್ಪಷ್ಟಪಡಿಸಿದರು. ಡಿಜಿಟಲ್ ತಾಣಗಳ ಸಾಫ್ಟ್‌ವೇರ್ ಮತ್ತು ವ್ಯವಸ್ಥೆಗಳು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ವಿನ್ಯಾಸಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಕುರಿತು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಅಗತ್ಯ ನಿಯಮ ರೂಪಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಪ್ರಸ್ತುತ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ವತಂತ್ರವಾಗಿ ಒಪ್ಪಂದಗಳಿಗೆ (ಕಾಂಟ್ರ್ಯಾಕ್ಟ್) ಒಳಗೊಳ್ಳುವ ಕಾನೂನು ಸಾಮರ್ಥ್ಯ ಹೊಂದಿಲ್ಲ. ಆದರೂ ಮಕ್ಕಳು ಸ್ವತಂತ್ರವಾಗಿ ಖಾತೆ ತೆರೆಯಲು ಮತ್ತು ನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಎಚ್.ಎಸ್. ಫೂಲ್ಕಾ ವಾದಿಸಿದರು. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ 2023ರ ಅಡಿ ಈ ವಿಚಾರ ಬರುತ್ತದೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದಾಗ, ಆ ಕಾಯ್ದೆಯ ಪ್ರಮುಖ ನಿಯಮಗಳು ಜಾರಿಗೆ ಬರಲು 2027ರವರೆಗೆ ಕಾಯಬೇಕಾಗುತ್ತದೆ, ಆದರೆ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರವೇ ಅಪ್ರಾಪ್ತರ ಒಪ್ಪಂದಗಳು ಅನೂರ್ಜಿತವಾಗಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಫೂಲ್ಕಾ ಪ್ರತಿಪಾದಿಸಿದರು.
ಈ ವೇಳೆ ಪೋಷಕರ ಒಪ್ಪಿಗೆಯ ಆಧಾರದ ಮೇಲೆ ನಿಯಂತ್ರಣ ವ್ಯವಸ್ಥೆ ತರಲು ಹಾಗೂ ಪೋಷಕರು ಮತ್ತು ವೇದಿಕೆಗಳ ನಡುವೆ ನೇರ ಒಪ್ಪಂದ ಏರ್ಪಡುವಂತೆ ಮಾಡಲು ಪರಿಶೀಲಿಸಬಹುದು ಎಂದು ಸಾಲಿಸಿಟರ್ ಜನರಲ್ ಸಲಹೆ ನೀಡಿದರು. ವಿದೇಶಗಳಲ್ಲಿ ನೋಂದಣಿಯಾಗಿರುವ ಕಂಪನಿಗಳಾಗಿದ್ದರೂ ಭಾರತದಲ್ಲಿ ಕಾರ್ಯಾಚರಣೆ ನಡೆಸುವಾಗ ಇಲ್ಲಿನ ಕಾನೂನು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದ ನ್ಯಾಯಪೀಠ, ಆನ್‌ಲೈನ್‌ನಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆ, ಬ್ಲ್ಯಾಕ್‌ಮೇಲ್, ಸೈಬರ್ ಬೆದರಿಕೆ ಹಾಗೂ ವೈಯಕ್ತಿಕ ವಿವರಗಳ ದುರುಪಯೋಗ ತಡೆಯಲು ಐಟಿ ಕಾಯ್ದೆಯ ಸೆಕ್ಷನ್ 79 ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದೆ.










