Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟ್ರಾಫಿಕ್ ದಂಡ ಪಾವತಿಸದಿದ್ದರೆ ಕರೆಂಟ್ ಬಿಲ್‌ನಲ್ಲೇ ವಸೂಲಿ? ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

---Advertisement---

ದೆಹಲಿ.ಸೆಪ್ಟೆಂಬರ್. 29 : ದೇಶಾದ್ಯಂತ ಕೋಟ್ಯಂತರ ರೂಪಾಯಿ ಮೊತ್ತದ ಸಂಚಾರ ನಿಯಮ ಉಲ್ಲಂಘನೆಯ ದಂಡ (ಇ-ಚಲನ್) ಬಾಕಿ ಉಳಿದಿರುವ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇವಲ ಇ-ಚಲನ್ ಜಾರಿ ಮಾಡಿದರೆ ಸಾಲದು, ದಂಡದ ಹಣವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದಿರುವ ನ್ಯಾಯಾಲಯ, ದಂಡ ಕಟ್ಟದವರ ವಿದ್ಯುತ್ ಬಿಲ್ ಜೊತೆ ಆ ಮೊತ್ತವನ್ನು ಸೇರಿಸಿ ವಸೂಲಿ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ತಿಳಿಸಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು, ಜನರು ಟ್ರಾಫಿಕ್ ದಂಡ ಪಾವತಿಸದಿದ್ದರೆ ಅದನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸಿ. ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭೀತಿ ಇರುವುದರಿಂದ ಅವರು ಹಣ ಪಾವತಿಸಲೇಬೇಕಾಗುತ್ತದೆ, ಈ ನಿಟ್ಟಿನಲ್ಲಿ ಸೂಕ್ತ ದಾರಿ ಕಂಡುಕೊಳ್ಳಿ ಎಂದು ಮೌಖಿಕವಾಗಿ ಸಲಹೆ ನೀಡಿದರು. ದೇಶದಲ್ಲಿ ಒಟ್ಟು ಸುಮಾರು 45,000 ಕೋಟಿ ರೂಪಾಯಿ ಮೌಲ್ಯದ ಇ-ಚಲನ್ ಬಾಕಿ ಇದ್ದು, ಅದರಲ್ಲಿ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಿಯಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಪೊಲೀಸರು ಲಕ್ಷಾಂತರ ಚಲನ್‌ಗಳನ್ನು ವಿತರಿಸಿದರೂ, ಹಣ ವಸೂಲಾಗದಿರುವುದೇ ಪ್ರಮುಖ ಸಮಸ್ಯೆಯಾಗಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿತು.

ದಂಡ ವಸೂಲಿಗೆ ಇತರ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ. ದಂಡ ಬಾಕಿ ಉಳಿಸಿಕೊಂಡ ವಾಹನಗಳ ಆರ್‌ಸಿ (ನೋಂದಣಿ ಪ್ರಮಾಣಪತ್ರ) ನವೀಕರಣ ರದ್ದುಪಡಿಸುವುದು, ನಕಲಿ ಆರ್‌ಸಿ ನೀಡುವುದನ್ನು ತಡೆಯುವುದು ಹಾಗೂ ಮಾಲೀಕತ್ವ ವರ್ಗಾವಣೆಯನ್ನು ನಿರ್ಬಂಧಿಸುವುದನ್ನು ಪರಿಶೀಲಿಸಬಹುದು ಎಂದು ಹೇಳಿದೆ. ಅಲ್ಲದೆ, ಫಿಟ್‌ನೆಸ್ ಪ್ರಮಾಣಪತ್ರ ನೀಡದಿರುವುದು, ಸಾರಿಗೆ ಪೋರ್ಟಲ್‌ನಲ್ಲಿ ಅಂತಹ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ಚಾಲನಾ ಪರವಾನಗಿ ನವೀಕರಣ ತಡೆಯುವುದು ಅಥವಾ ಅಮಾನತುಗೊಳಿಸುವುದು, ಪಿಯುಸಿ ಪ್ರಮಾಣಪತ್ರ ನಿರಾಕರಿಸುವುದು ಮತ್ತು ಅಗತ್ಯವಿದ್ದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಗಳನ್ನೂ ಪ್ರಸ್ತಾಪಿಸಿದೆ.

ಆದಾಗ್ಯೂ, ವಿದ್ಯುತ್ ಬಿಲ್‌ನಲ್ಲಿ ಟ್ರಾಫಿಕ್ ದಂಡ ಸೇರಿಸುವ ಕುರಿತು ನೀಡಿರುವ ಹೇಳಿಕೆಯು ಕೇವಲ ವಿಚಾರಣೆ ವೇಳೆ ನೀಡಲಾದ ಸಲಹೆಯಾಗಿದ್ದು, ಯಾವುದೇ ಅಂತಿಮ ಆದೇಶ ಅಥವಾ ಕಡ್ಡಾಯ ನಿರ್ದೇಶನವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ