ದೆಹಲಿ: ದೇಶಾದ್ಯಂತ ಲಕ್ಷಾಂತರ ಗ್ರಾಹಕರು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಆತಂಕದಲ್ಲಿದ್ದ ಬೆನ್ನಲ್ಲೇ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಮುಷ್ಕರ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಭಾನುವಾರ ರಾತ್ರಿ ಭಾರತೀಯ ಬ್ಯಾಂಕುಗಳ ಒಕ್ಕೂಟ (IBA) ಹಾಗೂ ಬ್ಯಾಂಕ್ ನೌಕರರ ಸಂಘಟನೆಗಳ ನಡುವೆ ನಡೆದ ಸಂಧಾನ ಸಭೆಯಲ್ಲಿ ಮಹತ್ವದ ಒಮ್ಮತ ಮೂಡಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ತೀರ್ಮಾನದಂತೆ, ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಕಾರ್ಯನಿರ್ವಹಣೆ ಮತ್ತು ಎಲ್ಲಾ ಶನಿವಾರಗಳಿಗೆ ರಜೆ ಘೋಷಿಸುವ ಬೇಡಿಕೆಯನ್ನು ಪರಿಶೀಲಿಸಲು ಐಬಿಎ ಹಾಗೂ ಯುಎಫ್ಬಿಯು ಜಂಟಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಒಪ್ಪಿಕೊಂಡಿವೆ. ಈ ಸಮಿತಿಯು ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಿ, ಗ್ರಾಹಕರಿಗೆ ತೊಂದರೆಯಾಗದಂತೆ ಸೂಕ್ತ ಪರಿಹಾರ ರೂಪಿಸಲಿದೆ. ಇದರೊಂದಿಗೆ, ಸ್ಕೇಲ್ IV ಮತ್ತು ಮೇಲ್ಮಟ್ಟದ ಹಿರಿಯ ಅಧಿಕಾರಿಗಳ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯಲ್ಲಿನ ಅಸಮಾನತೆಯನ್ನು ಸರಿಪಡಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಮಾತುಕತೆ ನಡೆಸುವುದಾಗಿ ಮತ್ತು ಮಾರ್ಚ್ 2024ರ ಒಪ್ಪಂದದ ಬಾಕಿ ಬೇಡಿಕೆಗಳನ್ನು ಶೀಘ್ರವೇ ಬಗೆಹರಿಸುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಭರವಸೆ ನೀಡಿದೆ.
ದೇಶಾದ್ಯಂತ ಸುಮಾರು 1.81 ಲಕ್ಷ ಬ್ಯಾಂಕ್ ಶಾಖೆಗಳ 8 ಲಕ್ಷಕ್ಕೂ ಅಧಿಕ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳಬೇಕಿತ್ತು. 2024ರ ಮಾರ್ಚ್ನಲ್ಲೇ ಐಬಿಎ ಶನಿವಾರಗಳ ರಜೆಗೆ ತಾತ್ವಿಕ ಒಪ್ಪಿಗೆ ನೀಡಿ, ಅದಕ್ಕೆ ಬದಲಾಗಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ನೌಕರರು ಸಮ್ಮತಿಸಿದ್ದರು. ಆದರೆ ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿತ್ತು. ಜತೆಗೆ ಹಿರಿಯ ಅಧಿಕಾರಿಗಳಿಗೆ ಮಾತ್ರ ಹೆಚ್ಚಿನ ಬೋನಸ್ ನೀಡುವ ಪಿಎಲ್ಐ ಯೋಜನೆಯ ತಾರತಮ್ಯದ ವಿರುದ್ಧ ನೌಕರರು ಆಕ್ರೋಶಗೊಂಡಿದ್ದರು. ಇದೀಗ ಉಭಯ ಬಣಗಳ ನಡುವಿನ ಸಭೆಯಲ್ಲಿ ಬೇಡಿಕೆಗಳ ಪರಿಶೀಲನೆಗೆ ಸ್ಪಷ್ಟ ಭರವಸೆ ಸಿಕ್ಕಿರುವುದರಿಂದ ನೌಕರರ ಸಂಘಟನೆಗಳು ಮುಷ್ಕರವನ್ನು ಹಿಂಪಡೆದಿದ್ದು, ಇಂದಿನಿಂದ ದೇಶಾದ್ಯಂತ ಎಂದಿನಂತೆ ಬ್ಯಾಂಕಿಂಗ್ ವಹಿವಾಟುಗಳು ಮುಂದುವರಿಯಲಿವೆ.










