Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಪ್ರಾಚೀನ ಕವಿಗಳು, ಸಾಹಿತ್ಯ ಪರಂಪರೆಯ ಬಗ್ಗೆ ವಿಸ್ತಾರ ಅಧ್ಯಯನ ಅಗತ್ಯ: ಸಂಶೋಧಕ ಎಸ್. ಕಾರ್ತಿಕ್

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ಯಾವ ಜಿಲ್ಲೆಗೂ ಇಲ್ಲದಂತ ವೈಶಿಷ್ಠ್ಯತೆಯಿದೆ ಎಂದು ಸಂಸ್ಕøತಿ ಸಂಶೋಧಕ ಬೆಂಗಳೂರಿನ ಎಸ್.ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕøತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 55 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪ್ರದೇಶದ ಪ್ರಾಚೀನ ಕನ್ನಡ ಕವಿಗಳು 10 ನೇ ಶತಮಾನದಿಂದ 1900 ರ ಅವಧಿ ವಿಷಯ ಕುರಿತು ಉಪನ್ಯಾಸ ನೀಡಿದರು.

ಕನ್ನಡದ ಮೊದಲ ಪದ ಸಿಕ್ಕ ಶಾಸನ ಕೂಡ ಜಿಲ್ಲೆಯಲ್ಲಿದೆ. ಕನ್ನಡ ಭಾಷೆಯ ಪ್ರಪ್ರಥಮ ಕೃತಿ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದು, ಮುರುಘಿಶಾಂತವೀರರ ಕಾಲದವರೆಗೂ ಯಾವುದೇ ಕೃತಿ ಲಭ್ಯವಾಗಿಲ್ಲ ಎನ್ನುವುದಾದರೆ ಸರಿಯಾಗಿ ಶೋಧನೆಯಾಗಿಲ್ಲ ಎನ್ನಬಹುದು. ಅವಿಭಾಜಿತ ಚಿತ್ರದುರ್ಗ ಜಿಲ್ಲೆಗೆ ಸೇರಿದ ಹರಿಹರದಲ್ಲಿ ಪೊಲ್ವಾಲದಂಡನಾಥನ ಹರಿಚಾರಿತ್ರ ಕೃತಿ ಸಿಕ್ಕಿದೆ. ಅದಾದ ನಂತರ ಕಾವ್ಯ ಕೃತಿ ರಚಿತವಾಗಿರುವುದು ಸಿಕ್ಕಿಲ್ಲ ಎಂದು ತಿಳಿಸಿದರು.

ಹಿರಿಯೂರಿನ ರಂಗ ಅವರ ತಂದೆ ರಂಗ ಇವರಿಬ್ಬರು ಕವಿಗಳಾಗಿದ್ದರು. ಬಬ್ಬೂರಿನ ರಂಗ ಹಾಗೂ ಹಿರಿಯೂರಿನ ಪ್ರಭು ಮಾದವ ಕವಿಗಳಿದ್ದರೆನ್ನುವುದನ್ನು ಗಮನಿಸಿದರೆ ಹಿರಿಯೂರಿನಲ್ಲಿ ಪಾಳೆಯ ಪಟ್ಟು ಇತ್ತು ಎನ್ನುವುದು ಗೊತ್ತಾಗುತ್ತದೆ. ಚಿತ್ರದುರ್ಗದ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಚಿತ್ರದುರ್ಗ ಜಿಲ್ಲೆಯ ಪರಿಸರದ ಪ್ರಾಚೀನ ಕನ್ನಡ ಕವಿಗಳ ಬಗ್ಗೆ ಸಂಶೋಧನಾ ಕೃತಿ ಪ್ರಕಟವಾಗಬೇಕಾದ ಅಗತ್ಯವಿದೆ. ಅದಕ್ಕಾಗಿ ವಿಸ್ತಾರವಾದ ಅಧ್ಯಯನವಾಗಬೇಕು. ಸಂಕ್ಷಿಪ್ತ ಪಕ್ಷಿನೋಟ ಒದಗಿಸಿದ್ದೇನೆ. ಜಿಲ್ಲೆಯ ಸಾಹಿತ್ಯ ಪರಂಪರೆ ದೊಡ್ಡದು. ಹಾಗಾಗಿ ಸಾಹಿತ್ಯ ಪರಂಪರೆಯ ವಿಸ್ತಾರವಾದ ಗ್ರಂಥ ಸಿದ್ದಪಡಿಸಬೇಕಿದೆ ಎಂದು ಹೇಳಿದರು.

 

ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಹೆಚ್ಚು ಶಾಸನಗಳಿವೆ ಎಂದು ಹೇಳುವುದು ಸರಿಯಲ್ಲ. 40 ಸಾವಿರ ಶಾಸನಗಳು ಕರ್ನಾಟಕದಲ್ಲಿ ಪ್ರಕಟಗೊಂಡಿವೆ. ಭಾರತದಲ್ಲಿಯೇ ಹೆಚ್ಚು ಶಾಸನಗಳಿರುವ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ. ಪ್ರಾಥಮಿಕ ಹಂತದ ಸಮಸ್ಯೆಗಳ ಬಗ್ಗೆ ಹೆಚ್ಚು ಕೆಲಸವಾಗಬೇಕಿದೆ. ಚಿತ್ರದುರ್ಗದ ಮೇಲೆ ಕೆಲಸ ಮಾಡಿದ ವಿದ್ವಾಂಸರುಗಳ ಪೈಕಿ ಮೊದಲನೆಯವರು ಹುಲ್ಲೂರು ಶ್ರೀನಿವಾಸ ಜೋಯಿಸರು. ಇನ್ನು ಎಷ್ಟೊ ಕೃತಿಗಳು ಪ್ರಕಟಿತ. ಅಪ್ರಕಟಿತ, ಲಭ್ಯ, ಅಲಭ್ಯವಾಗಿವೆ. ಬೃಹನ್ಮಠದ ಹಸ್ತಪ್ರತಿ ಭಂಡಾರದಲ್ಲಿ ಅನೇಕ ಕೃತಿಗಳಿವೆ. ಚಿತ್ರದುರ್ಗ ಪರಿಸರ, ಕನ್ನಡ ಕವಿಗಳ ಬಗ್ಗೆ ಹೆಚ್ಚು ಅಧ್ಯಯನವಾಗಬೇಕೆಂದರು.
ಸಾಹಿತ್ಯ ಅಧ್ಯಯನ ಮಾಡಲು ಹೊರಟಾಗ ಕವಿಗಳ ಬಗ್ಗೆ ಕೃತಿ ಸಿದ್ದಪಡಿಸಬೇಕಿದೆ. ಎಷ್ಟೊ ಸಾಹಿತ್ಯ ಕೈಬಿಟ್ಟು ಹೋಗಿರಬಹುದು. ಲಭ್ಯವಿರುವುದನ್ನಾದರೂ ಅಧ್ಯಯನ ಮಾಡಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ನುಡಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಯುವ ಸಂಶೋಧಕರುಗಳ ಪೈಕಿ ಎಸ್.ಕಾರ್ತಿಕ್ ತುಂಬಾ ವಿಶಿಷ್ಟವಾದವರು. ನೇರ, ನಿಷ್ಠುರ, ವಸ್ತು ನಿಷ್ಠ ಸಂಶೋಧಕರೆನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಾಚೀನ ಸಾಹಿತ್ಯ ಶಾಸನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರು. ಜಿಲ್ಲೆಯ ಪ್ರಾಚೀನ ಕನ್ನಡ ಕವಿಗಳ ಬಗ್ಗೆ ಮೊದಲ ಬಾರಿ ವಸ್ತುನಿಷ್ಟವಾಗಿ ಅಧ್ಯಯನ ನಡೆಸಿದ್ದಾರೆಂದು ಪರಿಚಯಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕರಾದ ಪ್ರೊ.ಲಕ್ಷ್ಮಣ್ ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್, ಪ್ರೊ.ಟಿ.ವಿ.ಸುರೇಶ್‍ಗುಪ್ತ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಮಲ್ಲಿಕಾರ್ಜುನಪ್ಪ, ಮುದ್ದರಂಗಪ್ಪ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಬಿ.ಆರ್.ಸುಬ್ರಮಣ್ಯ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now