Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸರಾ ಹಬ್ಬ ಉದ್ಘಾಟನೆಗೆ ಗವಿಮಠದ ಶ್ರೀಗಳು ಆಹ್ವಾನ ತಿರಸ್ಕರಿಸಿಲ್ಲ, ಅದು ವದಂತಿ : ಸಚಿವ ಶಿವರಾಜ ತಂಗಡಗಿ ಸ್ಪಷ್ಟನೆ

---Advertisement---

ಕೊಪ್ಪಳ.ಸೆಪ್ಟೆಂಬರ್.27 : ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೊಪ್ಪಳದ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸುವುದು ನಿಶ್ಚಿತ. ಈ ಕುರಿತು ಯಾವುದೇ ಅನುಮಾನ ಅಥವಾ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಲ್ಲ, ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಮಾಹಿತಿ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕವೇ, ಈ ಬಾರಿಯ ಮೈಸೂರು ದಸರಾವನ್ನು ಗವಿಸಿದ್ದೇಶ್ವರ ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಸೆ.24ರಂದು ಮುಖ್ಯಮಂತ್ರಿಗಳೇ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಅಧಿಕೃತ ಘೋಷಣೆಯ ನಂತರವೂ ಶ್ರೀಗಳು ಆಹ್ವಾನ ತಿರಸ್ಕರಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಕೆಲವರು ಹರಡುತ್ತಿದ್ದಾರೆ. ಇದು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ಸರ್ಕಾರವು ಈಗಾಗಲೇ ಗವಿಮಠದೊಂದಿಗೆ ಸಂಪರ್ಕ ಸಾಧಿಸಿದ್ದು, ಸೆ.28ರಂದು ಖುದ್ದು ಗವಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀಗಳನ್ನು ಅಧಿಕೃತವಾಗಿ ಆಹ್ವಾನಿಸಲು ದಿನಾಂಕ ನಿಗದಿಯಾಗಿದೆ. ಹೀಗಾಗಿ, ಶ್ರೀಗಳ ಒಪ್ಪಿಗೆ ಇಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ನಾಡಹಬ್ಬ ಮೈಸೂರು ದಸರಾ ಕುರಿತು ಸುಳ್ಳು ಹಾಗೂ ಆಧಾರರಹಿತ ಮಾಹಿತಿ ಹರಡಿ ಜನರಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ದಸರಾ ಉದ್ಘಾಟನೆ ಸೇರಿದಂತೆ ಯಾವುದೇ ಅಧಿಕೃತ ಮಾಹಿತಿಗಾಗಿ ಸರ್ಕಾರದ ಅಧಿಕೃತ ಪ್ರಕಟಣೆಗಳನ್ನೇ ಪರಿಗಣಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ.

Join WhatsApp

Join Now

Join Telegram

Join Now