Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಭದ್ರಾ ನಾಲೆಗಳ ಮೂಲಕ ಕುಡಿಯುವ ನೀರು ಪೂರೈಕೆ: ನಾಲೆಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

---Advertisement---

ದಾವಣಗೆರೆ : ಭದ್ರಾ ಜಲಾಶಯದ ಬಲದಂಡೆ, ಎಡದಂಡೆ, ಗೊಂದಿ ಹಾಗೂ ಇತರೆ ವಿತರಣಾ ನಾಲೆಗಳ ಮೂಲಕ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ನೀರು ಹರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಲೆಗಳ 200 ಮೀಟರ್ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಪ್ರಸ್ತುತ ಮಳೆಯ ಕೊರತೆಯಿರುವುದರಿಂದ ಅಂತರ್ಜಲ ವೃದ್ಧಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಈ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹರಿಸುತ್ತಿರುವ ನೀರನ್ನು ಡಿಸೆಂಬರ್ 2026ರ ವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಬಳಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೈತರು ಈ ನೀರನ್ನು ಕೃಷಿ ಬೆಳೆಗಳಿಗೆ ಉಪಯೋಗಿಸುವಂತಿಲ್ಲ ಹಾಗೂ ಮೋಟಾರ್ ಮೂಲಕ ಅನಧಿಕೃತವಾಗಿ ನೀರೆತ್ತುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅನ್ವಯ ಅಕ್ಟೋಬರ್ 2, 2026ರ ಮಧ್ಯರಾತ್ರಿ 12.00 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಆದೇಶವು ಭದ್ರಾ ಬಲದಂಡೆ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ, ಆನವೇರಿ ಶಾಖಾ ನಾಲೆ ಹಾಗೂ ಇದರ ವ್ಯಾಪ್ತಿಯ ಎಲ್ಲಾ ವಿತರಣಾ ನಾಲೆಗಳಿಗೆ ಅನ್ವಯಿಸುತ್ತದೆ.

ಈ ಅವಧಿಯಲ್ಲಿ ಕಾಲುವೆಗಳ ಪಾತ್ರದಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಚ್ಚುಕಟ್ಟು ಭಾಗದ ಎಲ್ಲಾ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

Join WhatsApp

Join Now

Join Telegram

Join Now