ಕಿನ್ಶಾಸಾ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ಶುಕ್ರವಾರ ಖಚಿತಪಡಿಸಿವೆ.
ಮೃತಪಟ್ಟ ಹಿರಿಯ ಸೇನಾಧಿಕಾರಿಗಳನ್ನು ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಾಲಯಿ ತಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಎಂದು ಗುರುತಿಸಲಾಗಿದೆ.
ಕಾಂಗೋ ಸೇನೆಯ ವಕ್ತಾರ ಮೇಜರ್ ಜನರಲ್ ಎಫೊಮಿ ಎಕೆಂಗೆ ಅವರು ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಇಬ್ಬರು ಜನರಲ್ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ನಿಯೋಗದಲ್ಲಿದ್ದ 12 ಸದಸ್ಯರು ಹಾಗೂ ವಿಮಾನ ಸಿಬ್ಬಂದಿ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ವಿಮಾನವು ನೈಋತ್ಯ ಕಿಕ್ವಿಟ್‌ನಿಂದ ರಾಜಧಾನಿ ಕಿನ್ಶಾಸಾಗೆ ಹಿಂತಿರುಗುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಂಗೆ ಎಂಬ ಪ್ರದೇಶದಲ್ಲಿ ಪತನಗೊಂಡಿದೆ. ಪರಿಣಾಮವಾಗಿ ವಿಮಾನದಲ್ಲಿದ್ದ ಎಲ್ಲರೂ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಮಂಡಳಿ ಅಧ್ಯಕ್ಷ ಟ್ರೈಫೋನ್ ಕಿನ್-ಕಿ ಮ್ಯುಲುಂಬಾ ತಿಳಿಸಿದ್ದು, ಘಟನೆ ಸಂಬಂಧ ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಪೂರ್ವ ಕಾಂಗೋ ಭಾಗದಲ್ಲಿ ರುವಾಂಡಾ ಬೆಂಬಲಿತ ಎಂ23 ಬಂಡುಕೋರರು ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ನಂತರ, ಅಲ್ಲಿನ ಸೇನೆಯು ನಿರಂತರವಾಗಿ ಅವರ ವಿರುದ್ಧ ಹೋರಾಟ ನಡೆಸುತ್ತಿರುವ ಸೂಕ್ಷ್ಮ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.











