ಬೆಂಗಳೂರು.ಸೆಪ್ಟೆಂಬರ್.22: ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಮಂಡ್ಯ, ಹುಬ್ಬಳ್ಳಿ, ಕಲಬುರಗಿ, ಬೀದರ್ ಹಾಗೂ ಧಾರವಾಡ ಸೇರಿದಂತೆ ರಾಜ್ಯದ ಒಟ್ಟು 8 ಪ್ರಮುಖ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ಅಧಿಕಾರಿಗಳ ಮನೆ, ಕಚೇರಿ ಹಾಗೂ ಫಾರ್ಮ್‌ಹೌಸ್‌ಗಳ ಮೇಲೆ ದಾಳಿ ನಡೆಸಿ ವ್ಯಾಪಕ ಶೋಧ ಕೈಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶಿವರಾಜ್ ಅವರ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ಮದ್ದೂರಿನ ವಿನಾಯಕ ನಗರದ ನಿವಾಸ ಹಾಗೂ ಅವಸರಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ.
ಹುಬ್ಬಳ್ಳಿಯ ಹೆಸ್ಕಾಂ ಸಹಾಯಕ ಇಂಜಿನಿಯರ್ ಕಿರಣ್ ಅವರ ಅಕ್ಷಯ ಕಾಲೋನಿಯ ನಿವಾಸ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬೀದರ್‌ನಲ್ಲಿ ಕೃಷಿ ಅಧಿಕಾರಿ ಮಾಣಿಕರಾವ್ ಅವರ ನಗರದ ಹಕ್ಕಾ ಕಾಲೋನಿಯ ನಿವಾಸ, ಹುಮ್ನಾಬಾದ್‌ನ ಮನೆ ಹಾಗೂ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್‌ಹೌಸ್‌ಗಳಲ್ಲಿ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.
ಅದೇ ರೀತಿ ಕಲಬುರಗಿಯಲ್ಲಿ ಜೆಸ್ಕಾಂ ಅಧಿಕಾರಿ ರಾಜೇಶ್ವರಿ ಅವರ ಮಹಾಲಕ್ಷ್ಮಿ ನಗರದ ನಿವಾಸದ ಮೇಲೆ ಎಸ್‌ಪಿ ಸಿದ್ಧರಾಜು ನೇತೃತ್ವದ ತಂಡ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ದೂರಿನ ಮೇರೆಗೆ ಆಸ್ತಿ ಪತ್ರಗಳು ಮತ್ತು ನಿವೇಶನಗಳ ದಾಖಲೆಗಳನ್ನು ಕೂಲಂಕಷವಾಗಿ ಜಾಲಾಡಲಾಗುತ್ತಿದೆ.











