ದೆಹಲಿ: ಆಹಾರ ಪದಾರ್ಥಗಳ ಮಾದರಿಯಲ್ಲೇ ಇನ್ಮುಂದೆ ಸೋಪು, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ಸೌಂದರ್ಯವರ್ಧಕ ಮತ್ತು ಶೌಚಾಲಯ ಬಳಕೆಯ (ಕಾಸ್ಮೆಟಿಕ್ಸ್ & ಟಾಯ್ಲೆಟ್ರೀಸ್) ಉತ್ಪನ್ನಗಳ ಪ್ಯಾಕೆಟ್ಗಳ ಮೇಲೂ ಅವು ಸಸ್ಯಾಹಾರವೇ ಅಥವಾ ಮಾಂಸಾಹಾರವೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.
ಈ ಕುರಿತು ಕೇಂದ್ರ ಸರ್ಕಾರವು ‘ಲೀಗಲ್ ಮೆಟ್ರಾಲಜಿ (ಪ್ಯಾಕ್ಡ್ ಕಮಾಡಿಟೀಸ್) ನಿಯಮಗಳು, 2011’ಕ್ಕೆ ತಿದ್ದುಪಡಿ ತಂದಿದ್ದು, ಹೊಸ ನಿಯಮಾವಳಿ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಗುರುತುಗಳು: ಸಸ್ಯಾಹಾರಿ (ವೆಜಿಟೇರಿಯನ್) ಮೂಲದ ಉತ್ಪನ್ನಗಳ ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚುಕ್ಕೆ (ಗ್ರೀನ್ ಡಾಟ್) ಹಾಗೂ ಮಾಂಸಾಹಾರಿ (ನಾನ್-ವೆಜಿಟೇರಿಯನ್) ಅಂಶಗಳನ್ನು ಒಳಗೊಂಡಿರುವ ಉತ್ಪನ್ನಗಳ ಮೇಲೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ (ರೆಡ್/ಬ್ರೌನ್ ಡಾಟ್) ಮುದ್ರಿಸುವುದು ಕಡ್ಡಾಯ.
ಸ್ಥಳ ನಿಗದಿ: ಗ್ರಾಹಕರು ಖರೀದಿಸುವಾಗ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಈ ಚಿಹ್ನೆಯನ್ನು ಪ್ಯಾಕೆಟ್ನ ಮುಂಭಾಗದ ಪ್ರಮುಖ ಸ್ಥಳದಲ್ಲಿ (ಮೇಲ್ಭಾಗದಲ್ಲಿ) ಪ್ರದರ್ಶಿಸಬೇಕು.
ಯಾವೆಲ್ಲಾ ಉತ್ಪನ್ನಗಳಿಗೆ ಅನ್ವಯ?: ಸೋಪು, ಶಾಂಪೂ, ಟೂತ್ಪೇಸ್ಟ್, ಮುಖಕ್ಕೆ ಹಚ್ಚುವ ಕ್ರೀಮ್ಗಳು ಸೇರಿದಂತೆ ದೈನಂದಿನ ಬಳಕೆಯ ಬಹುತೇಕ ಸೌಂದರ್ಯವರ್ಧಕ ಹಾಗೂ ಕಾಸ್ಮೆಟಿಕ್ ಉತ್ಪನ್ನಗಳು ಈ ಹೊಸ ನಿಯಮದ ವ್ಯಾಪ್ತಿಗೆ ಬರಲಿವೆ.
ತಮ್ಮ ಧಾರ್ಮಿಕ ನಂಬಿಕೆ, ಆಹಾರ ಪದ್ಧತಿ ಅಥವಾ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಆಯ್ಕೆ ಮಾಡಲು ಈ ನಿಯಮವು ಗ್ರಾಹಕರಿಗೆ ಹೆಚ್ಚಿನ ಪಾರದರ್ಶಕತೆ ಒದಗಿಸಲಿದೆ.











