Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೆ. 24 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಪ್ರವಾಸ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಡಿಕೆ ಶಿವಕುಮಾರ್
---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 24ರ ಗುರುವಾರದಂದು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಹಲವು ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಧಿಕೃತ ಪ್ರವಾಸ ಪಟ್ಟಿಯ ಪ್ರಕಾರ, ಸೆಪ್ಟೆಂಬರ್.24ರ ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಲಿರುವ ಅವರು, ಮಧ್ಯಾಹ್ನ 12:00 ಗಂಟೆಗೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆವರಣದ ಹೆಲಿಪ್ಯಾಡ್ಗೆ ತಲುಪಲಿದ್ದಾರೆ. ಅಲ್ಲಿ ಶ್ರೀ ಮದ್ವಿಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಳಿಕ ರಸ್ತೆ ಮೂಲಕ ಗೋನೂರು ಗ್ರಾಮಕ್ಕೆ ತೆರಳಲಿರುವ ಮುಖ್ಯಮಂತ್ರಿಗಳು, ಮಧ್ಯಾಹ್ನ 1:15ಕ್ಕೆ ಜಲಸಂಪನ್ಮೂಲ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವತಿಯಿಂದ ಆಯೋಜಿಸಲಾದ ಭದ್ರಾ ಮೇಲ್ದಂಡೆ ಯೋಜನೆಯಿಂದ ಬಯಲು ಸೀಮೆಗೆ ನೀರು ಹರಿಸುವ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಲಿಂದ ಚಳ್ಳಕೆರೆ ಮತಕ್ಷೇತ್ರದ ಬೆಳಘಟ್ಟ ಗ್ರಾಮಕ್ಕೆ ತೆರಳಿ, ಮಧ್ಯಾಹ್ನ 1:55ಕ್ಕೆ ಜೂನಿಯರ್ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 2:30ಕ್ಕೆ ತುರುವನೂರಿಗೆ ಭೇಟಿ ನೀಡಿ, ನೂತನ ಜೂನಿಯರ್ ಕಾಲೇಜು ಕಟ್ಟಡ, 2 ಕಿ.ಮೀ ಉದ್ದದ ಸಿ.ಟಿ.ಎಂ. ರಾಜ್ಯ ರಸ್ತೆ, ಮಹಾತ್ಮ ಗಾಂಧಿ ಪಾರ್ಕ್, ವಾಲ್ಮೀಕಿ ಭವನ, ಕನಕ ಭವನ, ಹಿರಿಯ ಪ್ರಾಥಮಿಕ ಶಾಲೆ, ಪ್ರಥಮ ದರ್ಜೆ ಕಾಲೇಜು ಹಾಗೂ ಇಂದಿರಾ ಗಾಂಧಿ ವಸತಿ ಶಾಲಾ ಕಟ್ಟಡಗಳ ಲೋಕಾರ್ಪಣೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 3:50ಕ್ಕೆ ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಗಳ ಬಳಿಕ ಸಂಜೆ 5:00 ಗಂಟೆಗೆ ಮುರುಘಾ ಮಠದ ಆವರಣದ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಅಗತ್ಯ ಶಿಷ್ಟಾಚಾರ, ಸೂಕ್ತ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now