ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬರೋಬ್ಬರಿ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಅಧಿಸೂಚನೆಯನ್ನು ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ವ್ಯಾಪ್ತಿಯಲ್ಲಿ ಬರುವ ಈ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.
ಹಿಂದೆ 2022ರಲ್ಲಿ ಕಲ್ಯಾಣ-ಕರ್ನಾಟಕ ಭಾಗದ 36 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ 778 ಹುದ್ದೆಗಳು ಸೇರಿದಂತೆ ಒಟ್ಟು 814 ಹುದ್ದೆಗಳ ಭರ್ತಿಗೆ ನೀಡಲಾಗಿದ್ದ ಅನುಮತಿಯನ್ನು ಪ್ರಸ್ತುತ ಮರುವರ್ಗೀಕರಿಸಿ ಹೊಸದಾಗಿ ಈ ಆದೇಶ ಹೊರಡಿಸಲಾಗಿದೆ. ಒಟ್ಟು 814 ಹುದ್ದೆಗಳಲ್ಲಿ ಕಲ್ಯಾಣ-ಕರ್ನಾಟಕ (KK) ವೃಂದಕ್ಕೆ 36 ಹಾಗೂ ಕಲ್ಯಾಣ-ಕರ್ನಾಟಕೇತರ (NKK) ವೃಂದಕ್ಕೆ 778 ಹುದ್ದೆಗಳು ಹಂಚಿಕೆಯಾಗಿವೆ.
ವಿಷಯವಾರು ಹುದ್ದೆಗಳ ವಿವರ:

ವಾಣಿಜ್ಯ ಶಾಸ್ತ್ರ (Commerce – Bst + Acc): ಒಟ್ಟು 150 ಹುದ್ದೆಗಳು (ಎನ್‌ಕೆಕೆ 146, ಕೆಕೆ 4)
ಇಂಗ್ಲಿಷ್: ಒಟ್ಟು 145 ಹುದ್ದೆಗಳು (ಎನ್‌ಕೆಕೆ 140, ಕೆಕೆ 5)
ಕಂಪ್ಯೂಟರ್ ಸೈನ್ಸ್: ಒಟ್ಟು 110 ಹುದ್ದೆಗಳು (ಎನ್‌ಕೆಕೆ 108, ಕೆಕೆ 2)

ಅರ್ಥಶಾಸ್ತ್ರ: ಒಟ್ಟು 90 ಹುದ್ದೆಗಳು (ಎನ್‌ಕೆಕೆ 85, ಕೆಕೆ 5)
ಕನ್ನಡ: ಒಟ್ಟು 89 ಹುದ್ದೆಗಳು (ಎನ್‌ಕೆಕೆ 84, ಕೆಕೆ 5)
ಇತಿಹಾಸ: ಒಟ್ಟು 50 ಹುದ್ದೆಗಳು (ಎನ್‌ಕೆಕೆ 45, ಕೆಕೆ 5)
ಭೌತಶಾಸ್ತ್ರ (Physics): ಒಟ್ಟು 30 ಹುದ್ದೆಗಳು (ಎನ್‌ಕೆಕೆ 30, ಕೆಕೆ 0)
ರಸಾಯನಶಾಸ್ತ್ರ (Chemistry): ಒಟ್ಟು 30 ಹುದ್ದೆಗಳು (ಎನ್‌ಕೆಕೆ 30, ಕೆಕೆ 0)
ಗಣಿತಶಾಸ್ತ್ರ (Mathematics): ಒಟ್ಟು 30 ಹುದ್ದೆಗಳು (ಎನ್‌ಕೆಕೆ 30, ಕೆಕೆ 0)

ಜೀವಶಾಸ್ತ್ರ (Biology): ಒಟ್ಟು 30 ಹುದ್ದೆಗಳು (ಎನ್‌ಕೆಕೆ 30, ಕೆಕೆ 0)
ರಾಜ್ಯಶಾಸ್ತ್ರ: ಒಟ್ಟು 25 ಹುದ್ದೆಗಳು (ಎನ್‌ಕೆಕೆ 20, ಕೆಕೆ 5)
ಸಮಾಜಶಾಸ್ತ್ರ: ಒಟ್ಟು 25 ಹುದ್ದೆಗಳು (ಎನ್‌ಕೆಕೆ 20, ಕೆಕೆ 5)
ಭೂಗೋಳಶಾಸ್ತ್ರ: ಒಟ್ಟು 10 ಹುದ್ದೆಗಳು (ಎನ್‌ಕೆಕೆ 10, ಕೆಕೆ 0)
ನೇಮಕಾತಿ ನಿಯಮಾವಳಿಗಳಿಗೆ ಈಗಾಗಲೇ ಸೂಕ್ತ ತಿದ್ದುಪಡಿ ತರಲಾಗಿದ್ದು, 9 ಮತ್ತು 10ನೇ ತರಗತಿಗಳಿಗೂ ಈ ಉಪನ್ಯಾಸಕರಿಂದ ಬೋಧನೆ ಮಾಡಿಸಲು ಅನುಕೂಲವಾಗುವಂತೆ ಸೇವಾ ನಿಯಮಗಳಿಗೆ ತರಲಾದ ತಿದ್ದುಪಡಿಯನ್ನೂ ಈ ಪ್ರಕ್ರಿಯೆಗೆ ಅನ್ವಯಿಸಲಾಗಿದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಿ, ಪ್ರಕ್ರಿಯೆ ಆರಂಭಿಸುವಂತೆ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಸೂಚಿಸಿದೆ.













