ಲಕ್ನೋ.ಸೆಪ್ಟೆಂಬರ್.16: ಕೇವಲ 12,500 ರೂಪಾಯಿ ಮೊಬೈಲ್ ಫೋನ್ ಇಎಂಐ (EMI) ಬಾಕಿ ಉಳಿಸಿಕೊಂಡಿದ್ದಕ್ಕೆ ಸಾಲ ವಸೂಲಾತಿ ಏಜೆಂಟ್ ಒಬ್ಬ ಯುವಕನನ್ನು ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡು ಬಲವಂತವಾಗಿ ಆತನ ದೇಹದಿಂದ ರಕ್ತ ಪಡೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋ ಹೊರವಲಯದ ನಿಗೋಹಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾರಾಮ್ಖೇಡ ಪುರ್ಹಿಯಾ ಗ್ರಾಮದ ಕೂಲಿ ಕಾರ್ಮಿಕ ನವಲ್ ಕುಮಾರ್ ಎಂಬಾತ ಸುಮಾರು ಒಂದು ವರ್ಷದ ಹಿಂದೆ ಸ್ಥಳೀಯ ಅಂಗಡಿಯೊಂದರಲ್ಲಿ ಶೂನ್ಯ ಮುಂಗಡ ಪಾವತಿ (Zero Down Payment) ಯೋಜನೆಯಡಿ 21,500 ರೂ. ಬೆಲೆಯ ಸ್ಯಾಮ್ಸಂಗ್ ಮೊಬೈಲ್ ಖರೀದಿಸಿದ್ದ. ತಿಂಗಳಿಗೆ 2,799 ರೂ. ಕಂತು ನಿಗದಿಯಾಗಿತ್ತು. ಆದರೆ ಮೊದಲ ಕಂತಿನ ಸಮಯದಲ್ಲೇ ಅಂಗಡಿಯವರು ಆತನಿಂದ ಮೊಬೈಲ್ ವಾಪಸ್ ಪಡೆದುಕೊಂಡಿದ್ದರು. ಆದಾಗ್ಯೂ ಕಂತಿನ ಹಣ ಪಾವತಿಸುವಂತೆ ಆತನಿಗೆ ನಿರಂತರ ಬೇಡಿಕೆ ಇಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬದ ದೂರಿನ ಪ್ರಕಾರ, ಸೆಪ್ಟೆಂಬರ್ 8 ರಂದು ಸಂಜೆ 5 ಗಂಟೆ ಸುಮಾರಿಗೆ ಶುಭಂ ಸಿಂಗ್ ಎಂಬ ಸಾಲ ವಸೂಲಾತಿ ಏಜೆಂಟ್ ತನ್ನ ಸಹಚರರೊಂದಿಗೆ ನವಲ್ ಮನೆಗೆ ಬಂದು, ಆತನನ್ನು ಬಲವಂತವಾಗಿ ಸ್ಕೂಟರ್ನಲ್ಲಿ ಕರೆದೊಯ್ದಿದ್ದಾನೆ. ಅಪರಿಚಿತ ಸ್ಥಳದಲ್ಲಿ ಕೂಡಿಹಾಕಿ ಆತನಿಂದ ಬಲವಂತವಾಗಿ ಕೂಲಿ ಕೆಲಸ ಮಾಡಿಸಿಕೊಳ್ಳಲಾಗಿದೆ.
लखनऊ : ये दिल दहला देनी वाली घटना राजधानी लखनऊ की है। एक युवक ने क़िस्त पर मोबाइल लिया। सभी किस्ते समय से दे रहा था, उसके बाद भी रिकवरी एजेंट ने युवक को उसके घर से उठाया और बहाने से लखनऊ ले आया।
किस्त न भरने के आरोप पर युवक को बंधक बनाया। उसका 1 यूनिट खून निकालकर भेजा और युवक… pic.twitter.com/GBE5kGvAkh
— Ashish Paswan (@ashishpaswan0) September 15, 2026
ಸೆರೆಯಲ್ಲಿದ್ದ ಸಮಯದಲ್ಲಿ ನವಲ್ನನ್ನು ಆಸ್ಪತ್ರೆಗೆ ಕರೆದೊಯ್ದು ಆತನಿಂದ ಬಲವಂತವಾಗಿ ಒಂದು ಯೂನಿಟ್ ರಕ್ತ ತೆಗೆಸಲಾಗಿದೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ. ಬಳಿಕ ಆರೋಪಿಗಳು ನವಲ್ನ ಅಣ್ಣ ರಾಜ್ಕುಮಾರ್ಗೆ ಕರೆ ಮಾಡಿ ಆನ್ಲೈನ್ ಮೂಲಕ 2,799 ರೂ. ಪಡೆದುಕೊಂಡಿದ್ದಾರೆ. ನಂತರ ಆತನನ್ನು ಬಿಡುಗಡೆ ಮಾಡಲು ಹೆಚ್ಚುವರಿಯಾಗಿ 12,500 ರೂ. ನೀಡಬೇಕು, ಇಲ್ಲದಿದ್ದರೆ ಗೋಮತಿ ನದಿಗೆ ಎಸೆಯುವುದಾಗಿ ಜೀವಬೆದರಿಕೆ ಹಾಕಿದ್ದಾರೆ.
ಘಟನೆ ನಡೆದು ಐದು ದಿನಗಳ ನಂತರ, ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಮುಂದಾದ ಬೆನ್ನಲ್ಲೇ ನವಲ್ನನ್ನು ಕ್ಯಾಬ್ ಮೂಲಕ ಮನೆಗೆ ಕಳುಹಿಸಲಾಗಿದೆ. ಸಂತ್ರಸ್ತ ಯುವಕ ತನ್ನ ಕಷ್ಟವನ್ನು ವಿವರಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗಿದ್ದು, ಬಳಿಕ ನವಲ್ ತಾಯಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ ನಂತರ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.













