ಸೂರ್ಯನ ಬಿಸಿಲು ಭೂಮಿಯ ಜೀವಸಂಕುಲಕ್ಕೆ ಅತ್ಯಗತ್ಯ. ಆದರೆ ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ನೇರಳಾತೀತ ಕಿರಣಗಳು (UV Rays) ನೇರವಾಗಿ ಭೂಮಿಗೆ ತಲುಪಿದರೆ ಸಕಲ ಜೀವರಾಶಿಗಳ ಅಸ್ತಿತ್ವಕ್ಕೇ ಸಂಚಕಾರ ಒದಗುತ್ತದೆ. ಇಂತಹ ವಿನಾಶಕಾರಿ ಕಿರಣಗಳಿಂದ ನಮಗೆ ರಕ್ಷಣೆ ನೀಡುತ್ತಿರುವುದು ವಾತಾವರಣದಲ್ಲಿರುವ ‘ಓಝೋನ್ ಪದರ’ (Ozone Layer).
ಮಾನವನ ಅತಿಯಾದ ಹಸ್ತಕ್ಷೇಪ ಹಾಗೂ ಅಪಾಯಕಾರಿ ರಾಸಾಯನಿಕಗಳ ಬಳಕೆಯಿಂದಾಗಿ ಅಂಟಾರ್ಕ್ಟಿಕಾ ಪ್ರದೇಶದಲ್ಲಿ ಓಝೋನ್ ಪದರ ತೀವ್ರವಾಗಿ ಹಾನಿಗೊಳಗಾಗಿದ್ದನ್ನು 1980ರ ದಶಕದಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದರು. ಈ ನಿಟ್ಟಿನಲ್ಲಿ ಓಝೋನ್ ಹಾಳುಮಾಡುವ ರಾಸಾಯನಿಕಗಳನ್ನು ನಿಯಂತ್ರಿಸಲು ಸೆಪ್ಟೆಂಬರ್ 16, 1987 ರಂದು ಐತಿಹಾಸಿಕ ‘ಮಾಂಟ್ರಿಯಲ್ ಪ್ರೋಟೋಕಾಲ್’ ಒಪ್ಪಂದ ಜಾರಿಗೆ ಬಂದಿತು. ಇದರ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವದಾದ್ಯಂತ ‘ಅಂತಾರಾಷ್ಟ್ರೀಯ ಓಝೋನ್ ದಿನ’ವನ್ನು ಆಚರಿಸಿ, ಜಾಗೃತಿ ಮೂಡಿಸಲಾಗುತ್ತಿದೆ.
ದೈನಂದಿನ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದಾದ 5 ಸರಳ ಪರಿಸರ ಸ್ನೇಹಿ ಕ್ರಮಗಳು ಇಲ್ಲಿವೆ
ಸ್ಥಳೀಯ ಮತ್ತು ಸಾವಯವ ಉತ್ಪನ್ನಗಳ ಬಳಕೆ: ಸ್ಥಳೀಯವಾಗಿ ಸಿಗುವ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ದೂರದ ಸಾರಿಗೆ ಮತ್ತು ಡೆಲಿವರಿ ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಬಹುದು. ಜೊತೆಗೆ ಸಾವಯವ ಪದಾರ್ಥಗಳಿಗೆ ಆದ್ಯತೆ ನೀಡುವುದು ಪರಿಸರಕ್ಕೆ ಹಿತಕಾರಿ.
ವಿದ್ಯುತ್ ಹಾಗೂ ಎಸಿ ಬಳಕೆ ಮಿತಿಗೊಳಿಸಿ: ಎಸಿ (AC) ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಕಿಟಕಿಗಳನ್ನು ತೆರೆದು ನೈಸರ್ಗಿಕ ಗಾಳಿಗೆ ಒತ್ತು ನೀಡಿ. ಹಳೆಯ ಫಿಲಮೆಂಟ್ ಬಲ್ಬ್ಗಳ ಬದಲು ಕಡಿಮೆ ವಿದ್ಯುತ್ ಹೀರುವ ಎಲ್ಇಡಿ (LED) ಬಲ್ಬ್ಗಳನ್ನು ಬಳಸಿ.
ಪರಿಸರಸ್ನೇಹಿ ಕ್ಲೀನಿಂಗ್ ವಸ್ತುಗಳ ಆಯ್ಕೆ: ಮನೆ ಮತ್ತು ಅಡುಗೆಮನೆ ಸ್ವಚ್ಛತೆಗೆ ಕೃತಕ ರಾಸಾಯನಿಕಗಳ ಬದಲು ನೈಸರ್ಗಿಕ ಅಥವಾ ಕಡಿಮೆ ರಾಸಾಯನಿಕವಿರುವ ಉತ್ಪನ್ನಗಳನ್ನು ಬಳಸಿ. ಸಿಎಫ್ಸಿ (CFC) ಮತ್ತು ಎಚ್ಸಿಎಫ್ಸಿ (HCFC) ಮುಕ್ತ ಉತ್ಪನ್ನಗಳನ್ನು ಆರಿಸಿಕೊಳ್ಳಿ.
ಹಸಿ ಕಸದಿಂದ ಸಾವಯವ ಗೊಬ್ಬರ: ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಮನೆಯ ಹಿತ್ತಲಿನಲ್ಲಿ ಅಥವಾ ಕಾಂಪೋಸ್ಟ್ ಬುಟ್ಟಿಯಲ್ಲಿ ಹಾಕಿ 90 ದಿನಗಳಲ್ಲಿ ಉತ್ತಮ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಗಿಡಗಳಿಗೆ ಬಳಸಬಹುದು.
ಏಕಬಳಕೆಯ ಪ್ಲಾಸ್ಟಿಕ್ಗೆ ವಿದಾಯ: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಕವರ್ಗಳು, ಸ್ಟ್ರಾಗಳು ಮತ್ತು ಬಾಟಲಿಗಳ ಬಳಕೆಯನ್ನು ಕಡ್ಡಾಯವಾಗಿ ತ್ಯಜಿಸಿ. ಮಾರುಕಟ್ಟೆಗೆ ಹೋಗುವಾಗ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ಒಯ್ಯಿರಿ ಹಾಗೂ ಮನೆಯಿಂದಲೇ ನೀರಿನ ಬಾಟಲಿ ಕೊಂಡೊಯ್ಯುವ ಅಭ್ಯಾಸ ರೂಢಿಸಿಕೊಳ್ಳಿ.
ಓಝೋನ್ ಪದರವನ್ನು ನಾವು ರಕ್ಷಿಸಿದರೆ, ಅದು ಭೂಮಿಯ ಸಮಸ್ತ ಜೀವಸಂಕುಲವನ್ನು ರಕ್ಷಿಸುತ್ತದೆ. ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ರಕ್ಷಣೆಯು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.












