Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆಲಸ ಮಾಡಲು ಇಷ್ಟವಿರದಿದ್ದರೆ ಬಿಟ್ಟುಬಿಡಿ : ಚಿತ್ರದುರ್ಗ ಜಿಲ್ಲಾಸ್ಪತ್ರೆ ಅಧಿಕಾರಿಗಳಿಗೆ ಸಚಿವ ರಘುಮೂರ್ತಿ ಎಚ್ಚರಿಕೆ

---Advertisement---

ಚಿತ್ರದುರ್ಗ. ಸೆ.15: ಕಳೆದ ನಾಲ್ಕೈದು ತಿಂಗಳಿಂದ ಸಿಟಿ ಸ್ಕ್ಯಾನ್ ಯಂತ್ರ ಕೆಟ್ಟು ನಿಂತು ರೋಗಿಗಳು ಪರದಾಡುವಂತಾಗಿದೆ. ವೈದ್ಯಾಧಿಕಾರಿಗಳ ಬೇಜಬ್ದಾರಿಯಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಟೀಕೆ ಎದುರಿಸುವಂತಾಗಿದೆ. ಕೂಡಲೇ ಸಿ.ಟಿ.ಸ್ಕ್ಯಾನ್ ದುರಸ್ತಿ ಪಡಿಸಿ ಸೇವೆ ಆರಂಭಿಸಬೇಕು. ಡೀನ್ ಹಾಗೂ ಜಿಲ್ಲಾಶಸ್ತ್ರಚಿಕಿತ್ಸಕರು ಸಮನ್ವಯಿಂದ ಕಾರ್ಯನಿರ್ವಹಿಸುವ ಮೂಲಕ, ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ದೊರೆಯವಂತೆ ನೋಡಿಕೊಳ್ಳಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸೂಚಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಚಿತ್ರದುರ್ಗ ವೈದ್ಯಕೀಯ ಕಾಲೇಜು ಹಾಗೂ ಬೋಧನಾ ಆಸ್ಪತ್ರೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂಬ ಕಾರಣ ನೀಡಿ ಜಿಲ್ಲಾಶಸ್ತ್ರಚಿಕಿತ್ಸಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಕಳೆದ ಫೆಬ್ರವರಿಯಲ್ಲಿಯೇ ಆಸ್ಪತ್ರೆಯ ಹೊಣೆ ಹೊತ್ತಿದ್ದರು, ಡೀನ್ ಸಿಟಿ ಸ್ಕ್ಯಾನ್ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ಆಸ್ಪತ್ರೆಗೆ ಬಂದು ಸಿಟಿ ಸ್ಕ್ಯಾನ್ ಸೌಲಭ್ಯ ಸಿಗದೆ ಪರದಾಡುತ್ತಿದ್ದರೆ, ಕೇವಲ ಪತ್ರ ವ್ಯವಹಾರ ಹಾಗೂ ನೆಪಗಳನ್ನು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಿ. ಸಮಸ್ಯೆ ಕಂಡುಬಂದ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಸುಮ್ಮನೆ ಕುಳಿತರೆ ಸಾರ್ವಜನಿಕರಿಗೆ ಉತ್ತರ ಕೊಡುವವರು ಯಾರು? ಇಬ್ಬರಿಗೂ ಕೆಲಸ ಮಾಡಲು ಇಷ್ಟವಿರದಿದ್ದರೆ ಬಿಟ್ಟುಬಿಡಿ ಎಂದು ಸಚಿವ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿ.ಟಿ.ಸ್ಕ್ಯಾನ್ ಸೇವೆ ನೀಡಲು ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಅಳವಡಿಸುವಾಗ ಅನುಮತಿ ಪಡೆದಿರಲಿಲ್ಲ. ಸದ್ಯ ಅನುಮತಿ ದೊರತಿದೆ. ಸಿ.ಟಿ.ಸ್ಕ್ಯಾನ್ ದುರಸ್ತಿ ಕಾರ್ಯ ನಡೆಯುತ್ತಿದ್ದು, ನಾಳೆಯಿಂದಲೇ ಸಿ.ಟಿ.ಸ್ಕ್ಯಾನ್ ಸೇವೆಯನ್ನು ಆರಂಭಿಸುವುದಾಗಿ ವೈದ್ಯಕೀಯ ಕಾಲೇಜು ಡೀನ್ ಡಾ.ಯುವರಾಜ್ ತಿಳಿಸಿದರು.

ಬ್ಲೂ ಸ್ಟಾರ್ ಕಂಪನಿಯ ಸಿ.ಟಿ.ಸ್ಕ್ಯಾನ್ ಟ್ಯೂಬ್ ಹಾಳಾಗಿದ್ದು, ದುರಸ್ತಿಗೆ ರೂ.57 ಲಕ್ಷ ವೆಚ್ಚವಾಗಲಿದೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.

ಆಸ್ಪತ್ರೆ ವ್ಯವಸ್ಥೆ ಸುಧಾರಿಸಲು ತಾಕೀತು: 

ಬಡ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ಕಾಲೇಜು ಸಹ ಜಿಲ್ಲಾಸ್ಪತ್ರೆಯೊಂದಿಗೆ ಸಮ್ಮಿಳಿತವಾಗಿದೆ. ಆದರೂ ಸೂಕ್ತ ಚಿಕಿತ್ಸೆ ನೀಡದೇ, ರೋಗಿಗಳನ್ನು ಖಾಸಗಿ ಆಸ್ಪತ್ರೆ ಅಥವಾ ಬೇರೆಕಡೆ ಶಿಫಾರಸ್ಸು ಮಾಡಲಾಗುತ್ತಿದೆ. ಸೂಕ್ತ ರೀತಿಯಲ್ಲಿ ಔಷಧಗಳನ್ನು ನೀಡದೇ, ಹೊರಗಡೆ ತರಲು ಬರೆದುಕೊಡಲಾಗುತ್ತಿದೆ. ಇಂತಹ ಪರಿಸ್ಥಿತಿ ಬದಲಾಗಬೇಕು. ಆಸ್ಪತ್ರೆ ವ್ಯವಸ್ಥೆ ಸುಧಾರಿಸಬೇಕು. ಸಾಕಷ್ಟು ಉಪಕರಣಗಳು ಇದ್ದರೂ ಅವುಗಳನ್ನು ಬಳಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. ಲ್ಯಾಕ್ರೋಸ್ಕೊಫಿ, ಎಂಡೋಸ್ಕೊಪಿ ಅಂತಹ ಚಿಕಿತ್ಸೆಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭಿಸಬೇಕು. ಆಸ್ಪತ್ರೆಯಲ್ಲಿ ದೊರಕುವ ಎಲ್ಲಾ ವಿವಿಧ ಚಿಕಿತ್ಸೆಗಳ ಮಾಹಿತಿ ಫಲಕವನ್ನು ಅಳವಡಿಸಿ, ಹೊರಗಡೆ ಶಿಫಾರಸ್ಸು ಮಾಡುವ ಪ್ರಕರಣಗಳ ಆಡಿಟ್ ನಡೆಸಿ, ವಿನಾಕಾರಣ ರೋಗಿಗಳನ್ನು ಅಳೆದಾಡಿಸಬೇಡಿ ಎಂದು ಸಚಿವ ಟಿ.ರಘಮೂರ್ತಿ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಜಿ.ಪಂ.ಸಿಪಿಓ ಗಾಯಿತ್ರಿ, ನಗರಸಭೆ ಆಯುಕ್ತೆ ಲಕ್ಷ್ಮಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now