Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುಪಿಐ ಬಳಕೆದಾರರಿಗೆ ಗುಡ್‌ ನ್ಯೂಸ್:  ₹2,000 ಒಳಗಿನ ವಹಿವಾಟಿನ  ಶುಲ್ಕದ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

---Advertisement---

ದೆಹಲಿ.ಸೆಪ್ಟೆಂಬರ್. 15 : ಯುಪಿಐ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಹಾಗೂ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಹಣ ವಸೂಲಿ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ₹2,000 ಒಳಗಿನ ಯುಪಿಐ ವಹಿವಾಟುಗಳು ಮತ್ತು ರುಪೇ (RuPay) ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಬ್ಯಾಂಕುಗಳಾಗಲಿ ಅಥವಾ ಪಾವತಿ ಸೇವಾ ಪೂರೈಕೆದಾರರಾಗಲಿ ಗ್ರಾಹಕರ ಮೇಲೆ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಶುಲ್ಕಗಳನ್ನು ಹೇರುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದ್ದು, ಈ ಸಂಬಂಧ ‘ಪೇಮೆಂಟ್ ಆಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಕಾಯ್ದೆ, 2007’ರ ಸೆಕ್ಷನ್ 10A ಅಡಿಯಲ್ಲಿ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.

ಸಾಮಾನ್ಯ ನಾಗರಿಕರಿಗೆ ಈ ಹಿಂದಿನಂತೆಯೇ ಯುಪಿಐ ಸೇವೆಗಳು ಲಭ್ಯವಿರಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಯುಪಿಐ ಸೇವೆಗಳು ಜಾರಿಗೆ ಬಂದ ದಿನದಿಂದಲೂ ಜನಸಾಮಾನ್ಯರಿಗೆ ಉಚಿತವಾಗಿಯೇ ಲಭ್ಯವಿದ್ದು, ಮುಂಬರುವ ದಿನಗಳಲ್ಲೂ ಯಾವುದೇ ವಹಿವಾಟು ಶುಲ್ಕ ಇರುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಈ ಸೇವೆಗಳನ್ನು ಎಂದಿನಂತೆ ಸಂಪೂರ್ಣ ಉಚಿತವಾಗಿ ಬಳಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಯುಪಿಐ ಸೇವೆಗಳು ಅಭೂತಪೂರ್ವ ರೀತಿಯಲ್ಲಿ ವಿಸ್ತರಿಸಿದ್ದು, ಬಳಕೆಯು ದಾಖಲೆ ಮಟ್ಟಕ್ಕೆ ಏರಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2016-17ರಲ್ಲಿ ಕೇವಲ 44 ಬ್ಯಾಂಕುಗಳಿಗೆ ಸೀಮಿತವಾಗಿದ್ದ ಯುಪಿಐ ಸೇವೆಗಳು ಪ್ರಸ್ತುತ 741 ಬ್ಯಾಂಕುಗಳಿಗೆ ವಿಸ್ತರಿಸಿವೆ. ಆರಂಭದಲ್ಲಿ ವಾರ್ಷಿಕವಾಗಿ 1.78 ಕೋಟಿಯಷ್ಟಿದ್ದ ವಹಿವಾಟುಗಳು 2026ರ ಹೊತ್ತಿಗೆ ಬರೋಬ್ಬರಿ 24,162 ಕೋಟಿಗೆ ತಲುಪಿವೆ. ಸದ್ಯ ದೇಶದಲ್ಲಿ ಪ್ರತಿದಿನ ಸರಾಸರಿ 66 ಕೋಟಿ ವಹಿವಾಟುಗಳು ನಡೆಯುತ್ತಿವೆ.

ಅಷ್ಟೇ ಅಲ್ಲದೆ, 2016-17ರಲ್ಲಿ ಕೇವಲ ₹0.07 ಲಕ್ಷ ಕೋಟಿಯಷ್ಟಿದ್ದ ವಹಿವಾಟಿನ ಮೌಲ್ಯ, ಇಂದು ಬೃಹತ್ ಮಟ್ಟದಲ್ಲಿ ಏರಿಕೆಯಾಗಿ ₹314 ಲಕ್ಷ ಕೋಟಿಗೆ ತಲುಪಿದೆ. ದೇಶಾದ್ಯಂತ ನಡೆಯುತ್ತಿರುವ ಒಟ್ಟಾರೆ ಡಿಜಿಟಲ್ ವಹಿವಾಟುಗಳಲ್ಲಿ ಯುಪಿಐ ಪಾಲು ಬರೋಬ್ಬರಿ ಶೇಕಡಾ 84 ರಷ್ಟಿದೆ. ಈ ವಹಿವಾಟುಗಳಲ್ಲಿ ಬಹುಪಾಲು ಸಣ್ಣ ವ್ಯಾಪಾರಿಗಳದ್ದಾಗಿದ್ದು, ಒಟ್ಟು ವಹಿವಾಟಿನಲ್ಲಿ ಶೇಕಡಾ 63 ರಷ್ಟು ಪಾಲು ಅವರದ್ದೇ ಆಗಿದೆ. ಇದರಲ್ಲಿಯೂ ₹500 ಕ್ಕಿಂತ ಕಡಿಮೆ ಮೊತ್ತದ ಪಾವತಿಗಳೇ ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Join WhatsApp

Join Now

Join Telegram

Join Now