ಕೆ.ಪಿ.ಓಂಕಾರಮೂರ್ತಿ,
ಪತ್ರಕರ್ತರು, ಚಿತ್ರದುರ್ಗ,
ಮೊ : 97405 68534
ಸುದ್ದಿಒನ್, ಚಿತ್ರದುರ್ಗ
ಜಗತ್ತು ನಮ್ಮನ್ನು ಸುಲಭವಾಗಿ ವಂಚಿಸುವುದು ನಮ್ಮ ದೌರ್ಬಲ್ಯಗಳಿಂದಲ್ಲ, ಬದಲಿಗೆ ನಮ್ಮ ಬಗ್ಗೆ ನಾವೇ ಕಟ್ಟಿಕೊಂಡಿರುವ ಸುಳ್ಳು ಕಲ್ಪನೆ ಮತ್ತು ಹೊಗಳಿಕೆಯ ಹಂಬಲದಿಂದ. ಬಾಹ್ಯ ಪ್ರಪಂಚದ ನಯವಂಚಕ ಮಾತುಗಳನ್ನು ಮೀರಿ, ನಮ್ಮ ಆಂತರ್ಯದ ಬಯಕೆಗಳನ್ನು ಅರಿತಾಗ ಮಾತ್ರ ನಿಜವಾದ ಎಚ್ಚರ ಸಾಧ್ಯವಾಗುತ್ತದೆ. ಕಾಗೆ ಮತ್ತು ನರಿಯ ಈ ರೂಪಕ ಕಥೆ, ಕಳೆದುಕೊಂಡ ರೊಟ್ಟಿಯ ತುಂಡಿಗಿಂತ ಕಂಡುಕೊಂಡ ಆತ್ಮಾವಲೋಕನವೇ ಬದುಕಿನ ಬಹುದೊಡ್ಡ ಪಾಠವೆಂಬುದನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತದೆ.
ಹಿರಿಯ ಪತ್ರಕರ್ತರಾದ ಕೆ.ಪಿ.ಓಂಕಾರಮೂರ್ತಿ ಚಿತ್ರದುರ್ಗ ಅವರ ಶರಣರ ಚೆನ್ನುಡಿ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ಕಥೆ ನಿಮ್ಮ ಸುದ್ದಿ ಒನ್ ನಲ್ಲಿದೆ ಮುಂದೆ ಓದಿ….
ದಟ್ಟ ಕಾಡಿನ ಹೃದಯಭಾಗದ ಆಲದ ಮರಕ್ಕೆ ತನ್ನ ಜನ್ಮ ದಿನವೇ ಮರೆತು ಹೋಗಿತ್ತು. ಅದರ ಬೇರುಗಳು ಭೂತಾಯಿಯ ಮಡಿಲು ಸೇರಿದ್ದವೋ..ಇಲ್ಲವೇ ಭೂತಾಯಿಯೇ ಅದರ ಸುತ್ತ ಆವರಿಸಿತ್ತೋ ಎಂಬಂತೆ ಯೌವನಕ್ಕೆ ಸವಾಲು ಹಾಕುವಂತೆ ಅದು ಶತಮಾನಗಳ ಕಾಲದಿಂದ ಜೀವಿಸುತ್ತಾ ಮಂದಸ್ಮಿತ ಬೀರುತ್ತಿತ್ತು.

ಮುಂಜಾನೆಯ ತಂಗಾಳಿ ಅದರ ಎಲೆಗಳನ್ನು ಸ್ಪರ್ಶಿಸುತ್ತಿದ್ದಂತೆ ಸಾವಿರಾರು ಎಲೆಗಳು ಒಟ್ಟಿಗೆ ಪಿಸುಗುಟ್ಟುತ್ತಿದ್ದವು. ಹಕ್ಕಿಗಳಿಗೆ ಅದು ಮರವಾಗಿರಲಿಲ್ಲ…ಒಂದು ಲೋಕವಾಗಿತ್ತು. ಆ ಲೋಕದ ಅತಿ ಎತ್ತರದ ಕೊಂಬೆಯೊಂದರಲ್ಲಿ ಒಂದು ಕಾಗೆ ವಾಸಿಸುತ್ತಿತ್ತು. ಅದು ಕಪ್ಪಾಗಿತ್ತು. ಆದರೆ ತನ್ನ ಬಣ್ಣದ ಬಗ್ಗೆ ಕೊಂಚವೂ ಅದಕ್ಕೆ ಸಂಕೋಚವಿರಲಿಲ್ಲ. ಅದು ಎಷ್ಟರ ಮಟ್ಟಕ್ಕೆ ಎಂದರೆ ತನ್ನ ರೆಕ್ಕೆಗಳ ಬಣ್ಣವೇ ತನ್ನ ಆಕಾಶ ಎಂದು ಅದು ಭಾವಿಸಿತ್ತು. ಆದರೆ ಅದರ ಮನಸ್ಸಿನೊಳಗೆ ಒಂದು ಚಿಕ್ಕ ಬಾಗಿಲಿತ್ತು…ಅದೇ ಹೊಗಳಿಕೆಯ ಬಾಗಿಲು.
ಯಾರಾದರೂ ಬಂದು ಆ ಹೊಗಳಿಕೆಯ ಬಾಗಿಲು ತಟ್ಟಿದರೆ ಸಾಕು, ಕಾಗೆಯ ಮನಸ್ಸು ತಕ್ಷಣ ತೆರೆದುಕೊಳ್ಳುತ್ತಿತ್ತು. ಒಂದು ದಿನ ಸೂರ್ಯನ ಹಾಜರಾತಿ ವೇಳೆಗೆ ವಾಯುವಿಹಾರಕ್ಕೆ ಹೋಗಿದ್ದ ಕಾಗೆಗೆ ದಾರಿಯಲ್ಲಿ ಒಂದು ರೊಟ್ಟಿಯ ತುಂಡು ಸಿಕ್ಕಿತು. ಅದು ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಆಲದ ಮರದ ಎತ್ತರದ ಕೊಂಬೆಯ ಮೇಲೆ ಬಂದು ಕುಳಿತಿತು.
ಸೂರ್ಯ ಇನ್ನೂ ಮರಗಳ ತುದಿಯನ್ನು ದಾಟಿರಲಿಲ್ಲ. ಅಷ್ಟರಲ್ಲಿ ಪೊದೆಗಳ ನಡುವೆ ನರಿ ಕಾಣಿಸಿಕೊಂಡಿತು. ಅದರ ಕಣ್ಣುಗಳು ರೊಟ್ಟಿಯ ಮೇಲೆ ಬಿದ್ದಿತ್ತು. ಆದರೆ ನರಿಗೆ ಬುದ್ಧಿಯ ಜತೆಗೆ ಕಾಯುವ ತಾಳ್ಮೆಯ ಕರಗತವಾಗಿತ್ತು. ಅದು ಮರದ ಕೆಳಗೆ ಬಂದು ನಿಂತು..ಎಷ್ಟು ಅದ್ಭುತವಾದ ಮುಂಜಾನೆ ಎಂದಿತು.
ಕಾಗೆ ತಲೆ ತಿರುಗಿಸಿ ನೋಡಿತು. ಆದರೆ ನರಿ ಮರವನ್ನು ನೋಡುತ್ತಿರಲಿಲ್ಲ. ಕಾಗೆಯನ್ನೇ ನೋಡುತ್ತಿತ್ತು. ಈ ಕಾಡಿನಲ್ಲಿ ಇಷ್ಟು ಸುಂದರವಾದ ಕಾಗೆಯನ್ನು ನಾನು ನೋಡಿಲ್ಲ ಎಂಬ ನರಿ ಮಾತಿಗೆ ಕಾಗೆ ಸೊಪ್ಪು ಹಾಕಲಿಲ್ಲ. ನಿನ್ನ ರೆಕ್ಕೆಗಳ ಮೇಲೆ ಬೆಳಕು ಬಿದ್ದಾಗ, ಕಪ್ಪು ಬಣ್ಣವೂ ಇಷ್ಟು ಸುಂದರವಾಗಬಹುದೇ ಎಂದು ಆಶ್ಚರ್ಯವಾಗುತ್ತದೆ ಎಂಬ ಮಾತು ಚಿಮ್ಮುತ್ತಿದ್ದಂತೆ ಕಾಗೆಯ ಕಣ್ಣುಗಳಲ್ಲಿ ಸಣ್ಣ ಹೊಳಪು ಮೂಡಿತು.
ನರಿ ಅದನ್ನು ಸೂಕ್ಷತೆಯಿಂದ ಗಮನಿಸಿ..ಆದರೆ…ನಿನ್ನ ಧ್ವನಿಯ ಬಗ್ಗೆ ಕೇಳಿದ್ದೇ ಹೆಚ್ಚು ಆಶ್ಚರ್ಯಕರ. ಕಾಗೆ ಈಗ ಎಚ್ಚರಿಕೆಯಿಂದ ಕೇಳುತ್ತಿತ್ತು. ನಿನ್ನ ಹಾಡು ಕೇಳಿದರೆ ಮುಂಜಾನೆಯ ಗಾಳಿಯೂ ನಿಂತು ಕೇಳುತ್ತದಂತೆ. ಹಕ್ಕಿಗಳ ರಾಜಸಭೆಯಲ್ಲಿ ನಿನ್ನನ್ನು ಗಾಯಕನಾಗಿ ಆರಿಸಬೇಕೆಂದು ನಾನು ಹಲವಾರು ಬಾರಿ ಯೋಚಿಸಿದ್ದೇನೆ.
ಆ ಕ್ಷಣಕ್ಕೆ ಕಾಗೆಯೊಳಗೆ ಯಾವುದೋ ಹಳೆಯ ಬಯಕೆ ಎಚ್ಚರಗೊಂಡಿತು. ನಾನು ನಿಜವಾಗಿಯೂ ಇಷ್ಟು ಚೆನ್ನಾಗಿ ಹಾಡುತ್ತೇನೆಯೇ? ನರಿ ಮತ್ತೆ ಹೇಳಿತು, ಆದರೆ ಕೇಳದೆ ನಂಬುವುದು ಹೇಗೆ? ಒಂದೇ ಒಂದು ಹಾಡು ಹಾಡು.
ಕಾಗೆ ಕೊಕ್ಕು ತೆರೆದಿತು..ಕಾ…ಒಂದು ಶಬ್ದ ಅಷ್ಟೇ. ರೊಟ್ಟಿಯ ತುಂಡು ಕೆಳಗೆ ಬಿತ್ತು. ನರಿ ಅದನ್ನು ಎತ್ತಿಕೊಂಡಿತು. ಆದರೆ ಓಡುವ ಮುನ್ನ ಅದು ಕಾಗೆಯ ಕಡೆ ನೋಡಿ, ನಿನ್ನ ಧ್ವನಿ ನಿಜಕ್ಕೂ ಅದ್ಭುತ ಎಂದು ಹೇಳಿ ಓಡಿಹೋಯಿತು. ಆದರೆ ಈ ಬಾರಿ ಆ ಮಾತಿನಲ್ಲಿ ವ್ಯಂಗ್ಯವಿತ್ತೋ, ಕೃತಜ್ಞತೆಯಿತ್ತೋ ಕಾಗೆಗೆ ತಿಳಿಯಲಿಲ್ಲ.
ಅದು ಬಹಳ ಹೊತ್ತು ಅಲ್ಲೇ ಕುಳಿತಿತ್ತು. ಕೆಳಗೆ ಕಾಡು ತನ್ನ ಕೆಲಸದಲ್ಲಿ ತೊಡಗಿತ್ತು. ಗಾಳಿ ಬೀಸುತ್ತಿತ್ತು. ಎಲೆಗಳು ಅಲುಗಾಡುತ್ತಿದ್ದವು. ದೂರದಲ್ಲಿ ಒಂದು ಹಕ್ಕಿ ಹಾಡುತ್ತಿತ್ತು. ಕಾಗೆ ಮಾತ್ರ ಮೌನವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಅದು ತನ್ನನ್ನೇ ಕೇಳಿಕೊಂಡಿತು: ನನ್ನನ್ನು ಮೋಸಗೊಳಿಸಿದ್ದು ನರಿ ಅಲ್ಲ. ನನ್ನನ್ನು ಮೋಸಗೊಳಿಸಿದ್ದು, ನನ್ನ ಬಗ್ಗೆ ನನಗಿದ್ದ ಒಂದು ಕಲ್ಪನೆ. ಆ ದಿನ ಕಾಗೆಗೆ ರೊಟ್ಟಿಗಿಂತ ದೊಡ್ಡದೊಂದು ವಸ್ತು ಕಳೆದುಹೋಗಿತ್ತು, ತನ್ನನ್ನು ಹೊಗಳಿಸಿಕೊಳ್ಳುವ ಹಂಬಲ.ಮತ್ತು ಅದೇ ದಿನ ಅದಕ್ಕೆ ಅದಕ್ಕಿಂತ ದೊಡ್ಡದೊಂದು ವಸ್ತು ಸಿಕ್ಕಿತ್ತು ಅದೇ ಮೌನ. !
*
ದಿನಗಳು ಉರುಳಿದವು…ಒಂದು ಇಳಿ ಸಂಜೆ ಅದೇ ನರಿ ಮತ್ತೆ ಆಲದ ಮರದ ಕೆಳಗೆ ಬಂದು ನಿಂತಿತು. ಈ ಬಾರಿ ಕಾಗೆಯ ಕೊಕ್ಕಿನಲ್ಲಿ ರೊಟ್ಟಿಯ ಬದಲು ಒಂದು ಕೆಂಬಣ್ಣದ ಹಣ್ಣಿತ್ತು. ನರಿ ಮೇಲಕ್ಕೆ ನೋಡಿ, ಅಯ್ಯೋ! ಕಾಡಿನ ಅತ್ಯಂತ ಸುಂದರವಾದ ಕಾಗೆ..ನೀನು ಎಂದು ಅಲಂಕಾರಿಕ ಮಾತು ಶುರು ಮಾಡಿತು.
ಮರು ಯೋಚಿಸದೆ ಕಾಗೆ ಜೋರಾಗಿ ನಕ್ಕಿತು. ಆದರೂ ಸುಮ್ಮನಾಗದ ನರಿ ಮಾತು ಮುಂದುವರಿಸಿ, ನಿನ್ನ ಧ್ವನಿಯಂತೂ ಅನ್ನುವಷ್ಟರಲ್ಲಿ ಮಧ್ಯ ಬಾಯಿ ಹಾಕಿದ ಕಾಗೆ…ನಿಲ್ಲು ನಾನು ಮಾತನಾಡುತ್ತೇನೆ ಎನ್ನುತ್ತಿದ್ದಂತೆ ನರಿ ಬೆವರುತ್ತಲೇ ಏಕೆ? ಏನಾಯಿತು ಎಂದು ಕೇಳಿತು.
ತಣ್ಣನೆ ತಂಗಾಳಿ ಬೀಸಿದಂತೆ ಮಾತು ಶುರು ಮಾಡಿದ ಕಾಗೆ, ಈ ಹಿಂದೆ ನಿನ್ನ ಮಾತು ಕೇಳುತ್ತಿದ್ದೆ. ಈಗ ನಿನ್ನ ಮಾತಿನ ಹಿಂದೆ ಇರುವ ಕಾರಣವನ್ನೂ ಕೇಳುತ್ತೇನೆ..ಕ್ಷಣಕ್ಕೆ ನರಿ ಮೌನಕ್ಕೆ ಜಾರಿತು.
ಕಾಗೆ ಕೆಂಬಣ್ಣದ ಹಣ್ಣನ್ನು ತನ್ನ ಕೊಕ್ಕಿನಲ್ಲಿ ಬಿಗಿಯಾಗಿ ಹಿಡಿದುಕೊಂಡಿತು. ಹೊಗಳಿಕೆ ಸತ್ಯವಾಗಿರಬಹುದು… ಸುಳ್ಳಾಗಿರಬಹುದು. ಆದರೆ ನನ್ನ ಮನಸ್ಸು ಅದನ್ನು ಏಕೆ ಕೇಳಲು ಇಷ್ಟಪಡುತ್ತದೆ ಎಂಬುದನ್ನು ಅರಿಯುವುದು ಮುಖ್ಯ. ಮರು ಕ್ಷಣಕ್ಕೆ ನರಿ ತಲೆ ತಗ್ಗಿಸಿ ಅಲ್ಲಿಂದ ಹೊರಟಿತು.
ಆಲದ ಮರದ ಎಲೆಗಳು ಮತ್ತೆ ಪಿಸುಗುಟ್ಟಿದವು. ಕಾಗೆ ಕಣ್ಣು ಮುಚ್ಚಿತು. ಆ ಮೌನದಲ್ಲಿ ಕಾಗೆಗೆ ಅದಕ್ಕೆ ಒಂದು ವಿಚಿತ್ರವಾದ ಸಂಗತಿ ಕೇಳಿಸಿತು..ಆಶ್ಚರ್ಯವೆಂದರೆ ಅದು ತನ್ನದೇ ಉಸಿರಿನ ಧ್ವನಿ. ಅದು ಮೊದಲ ಬಾರಿಗೆ ತನ್ನೊಳಗಿನ ಉಸಿರು.
*
ಅಂದಿನಿಂದ ಯಾರಾದರೂ ಅದನ್ನು ಹೊಗಳಿದಾಗ ತಕ್ಷಣ ಹಾರುವುದು ಇರಲಿ ಟೀಕಿಸಿದಾಗ ಸಹ ಕುಗ್ಗಲಿಲ್ಲ. ಅದು ಮೊದಲು ಮೌನವಾಗುತ್ತಿತ್ತು. ಏಕೆಂದರೆ ಅದಕ್ಕೆ ತಿಳಿದಿತ್ತು..ಹೊರಗಿನ ಜಗತ್ತನ್ನು ಗೆಲ್ಲುವುದಕ್ಕಿಂತ ಮೊದಲು, ನಮ್ಮೊಳಗಿನ ಒಂದು ಸಣ್ಣ ಆಸೆಯನ್ನು ಗುರುತಿಸುವುದೇ ದೊಡ್ಡ ಗೆಲುವು.
ಆಲದ ಮರ ಹಾಗೆಯೇ ನಿಂತಿತ್ತು. ಗಾಳಿ ಹಾಗೆಯೇ ಬೀಸುತ್ತಿತ್ತು. ಹಕ್ಕಿಗಳು ಹಾಗೆಯೇ ಹಾಡುತ್ತಿದ್ದವು. ಆದರೆ ಕಾಗೆಯೊಳಗೆ ಮಾತ್ರ ಒಂದು ಬದಲಾವಣೆ ಸಂಭವಿಸಿತ್ತು. ಅದು ಈಗ ರೊಟ್ಟಿಯನ್ನು ಮಾತ್ರ ಕಾಯುತ್ತಿರಲಿಲ್ಲ. ತನ್ನ ಮನಸ್ಸು ಯಾವಾಗ ಮಾತನಾಡುತ್ತದೆ, ಯಾವಾಗ ಮೌನವಾಗುತ್ತದೆ ಎಂಬುದನ್ನು ಕಾಯುತ್ತಿತ್ತು.
ನಿನ್ನನ್ನು ಮೋಸಗೊಳಿಸುವವನು ಹೊರಗಿಲ್ಲ. ನಿನ್ನೊಳಗೆ ನೀನು ನಂಬಿಕೊಂಡಿರುವ ಸುಳ್ಳನ್ನು ತೋರಿಸುವವನೇ ಹೊರಗಿನ ಮೋಸಗಾರ.

















