ಜಕಾರ್ತಾ: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಭಾನುವಾರ ಬೆಳಿಗ್ಗೆ ಭೀಕರ ಕಡಲ ದುರಂತ ಸಂಭವಿಸಿದ್ದು, 240 ಜನರಿದ್ದ ಪ್ರಯಾಣಿಕರ ಹಡಗೊಂದು ದಿಢೀರ್ ನಾಪತ್ತೆಯಾಗಿದೆ. ಪೂರ್ವ ಜಾವಾದಿಂದ ಬೊರ್ನಿಯೊ ದ್ವೀಪದ ದಕ್ಷಿಣ ಕಾಲಿಮಂತನ್ಗೆ ತೆರಳುತ್ತಿದ್ದ ಈ ಹಡಗಿನ ಪತ್ತೆಗಾಗಿ ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ (Basarnas) ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ.
ದಕ್ಷಿಣ ಕಾಲಿಮಂತನ್ ಪ್ರಾಂತ್ಯದ ರಾಜಧಾನಿ ಬಂಜರ್ಮಾಸಿನ್ನ ರಕ್ಷಣಾ ಕಾರ್ಯಾಚರಣೆ ಕಚೇರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ‘ವರ್ಗೋ ಟ್ರಾನ್ಸ್ಪೋರ್ಟ್ 8’ (Virgo Transport 8) ಹೆಸರಿನ ಈ ಹಡಗು ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರವಾದ ಸುರಬಯಾದಿಂದ ಬಂಜರ್ಮಾಸಿನ್ಗೆ ಹೊರಟಿತ್ತು.
ಪ್ರಯಾಣದ ಮಧ್ಯೆ ಜಾವಾ ಸಮುದ್ರದಲ್ಲಿ ಹಡಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂಜರ್ಮಾಸಿನ್ ಬಂದರಿನಿಂದ ಸುಮಾರು 148 ಕಿಲೋಮೀಟರ್ ದೂರದಲ್ಲಿ ಹಡಗಿನ ಕೊನೆಯ ಲೊಕೇಶನ್ ದಾಖಲಾಗಿದೆ.
ಹಡಗಿನಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 240 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಸಂಪರ್ಕ ಕಡಿತಗೊಂಡ ತಕ್ಷಣವೇ ಬಂಜರ್ಮಾಸಿನ್ ರಕ್ಷಣಾ ಪಡೆಗಳು ಸಂಭವನೀಯ ಸ್ಥಳಕ್ಕೆ ಧಾವಿಸಿವೆ.
ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ಅಥವಾ ಹಡಗು ಮುಳುಗಿರುವ ಬಗ್ಗೆ ಅಧಿಕೃತ ದೃಢೀಕರಣವಾಗಿಲ್ಲ. ಸಮುದ್ರದಲ್ಲಿ ಉಂಟಾದ ಪ್ರತಿಕೂಲ ಹವಾಮಾನ ಅಥವಾ ತಾಂತ್ರಿಕ ದೋಷ ಈ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.










