ಬೆಂಗಳೂರು.ಸೆಪ್ಟೆಂಬರ್.12: ಆಧಾರ್ ಕಾರ್ಡ್ನಲ್ಲಿ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಬೇಕೆ? ಇನ್ನು ಮುಂದೆ ಯಾವುದೇ ಆತಂಕ ಬೇಡ, ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಕುಳಿತು ನಂಬರ್ ಅಪ್ಡೇಟ್ ಮಾಡಿಕೊಳ್ಳಬಹುದು. ಆಧಾರ್ ಆಧಾರಿತ ಒಟಿಪಿ ಪರಿಶೀಲನೆ ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಆಧಾರ್ಗೆ ಮೊಬೈಲ್ ನಂಬರ್ ಜೋಡಣೆ ಕಡ್ಡಾಯ. ಹಿಂದೆ ಇದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಿಗೆ ಅಲೆಯಬೇಕಿತ್ತು, ಆದರೆ ಈಗ ಯುಐಡಿಎಐ (UIDAI) ಬಿಡುಗಡೆ ಮಾಡಿರುವ ಹೊಸ ಆ್ಯಪ್ ಮೂಲಕ ಮೊಬೈಲ್ನಿಂದಲೇ ಸುಲಭವಾಗಿ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆಧಾರ್ ಆ್ಯಪ್ನಲ್ಲಿ ನೋಂದಾಯಿಸಿಕೊಳ್ಳುವ ವಿಧಾನ
ಗೂಗಲ್ ಪ್ಲೇ ಸ್ಟೋರ್ನಿಂದ ಅಧಿಕೃತ ಆಧಾರ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ಆ್ಯಪ್ ಓಪನ್ ಮಾಡಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಯಮಗಳು ಮತ್ತು ಗೌಪ್ಯತಾ ನೀತಿಗಳನ್ನು ಒಪ್ಪಿಕೊಳ್ಳಿ.
ಸಿಮ್ ಕಾರ್ಡ್ ಆಯ್ಕೆ ಮಾಡಿ, ಫೇಸ್ ಅಥೆಂಟಿಕೇಶನ್ (ಮುಖ ಗುರುತಿಸುವಿಕೆ) ಪ್ರಕ್ರಿಯೆ ಪೂರ್ಣಗೊಳಿಸಿ.
ಬಳಿಕ ಆ್ಯಪ್ಗಾಗಿ ಆರು ಅಂಕಿಗಳ ಸೆಕ್ಯುರಿಟಿ ಪಿನ್ (PIN) ಸೆಟ್ ಮಾಡಿ.
ಆ್ಯಪ್ ಮೂಲಕ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?
ಆ್ಯಪ್ನಲ್ಲಿ ‘ಮೊಬೈಲ್ ನಂಬರ್ ಅಪ್ಡೇಟ್’ ಆಯ್ಕೆಯನ್ನು ಆರಿಸಿ.
ನಿಮ್ಮ ಹೊಸ ಮೊಬೈಲ್ ನಂಬರ್ ನಮೂದಿಸಿ, ಬರುವ ಒಟಿಪಿ (OTP) ದೃಢೀಕರಿಸಿ.
ಫೇಸ್ ಅಥೆಂಟಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನಿಗದಿತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

ಕೆಲವೇ ದಿನಗಳಲ್ಲಿ ನಿಮ್ಮ ಹೊಸ ಮೊಬೈಲ್ ನಂಬರ್ ಆಧಾರ್ಗೆ ಅಪ್ಡೇಟ್ ಆಗುತ್ತದೆ.
ಹಳೆಯ ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇಲ್ಲದಿದ್ದರೆ ಏನು ಮಾಡಬೇಕು?
ನಿಮ್ಮ ಹಳೆಯ ಮೊಬೈಲ್ ನಂಬರ್ ಪ್ರಸ್ತುತ ಕಾರ್ಯನಿರ್ವಹಿಸದಿದ್ದರೆ ಅಥವಾ ನೀವು ಮೊದಲ ಬಾರಿಗೆ ಮೊಬೈಲ್ ನಂಬರ್ ಲಿಂಕ್ ಮಾಡುತ್ತಿದ್ದರೆ, ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಕಡ್ಡಾಯ. ಹಳೆಯ ನಂಬರ್ ಚಾಲ್ತಿಯಲ್ಲಿದ್ದಾಗ ಮಾತ್ರ ಆನ್ಲೈನ್ ಮೂಲಕ ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದು. ಆಧಾರ್ ಸೇವೆಗಳನ್ನು ಪಡೆಯಲು ಮತ್ತು ಅಗತ್ಯ ಸಂದರ್ಭಗಳಲ್ಲಿ ಒಟಿಪಿ ದೃಢೀಕರಣಕ್ಕಾಗಿ ಪ್ರಸ್ತುತ ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ.













