ಬೆಂಗಳೂರು.ಸೆಪ್ಟೆಂಬರ್.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಡಿಜಿಟಲ್ ಹೆಜ್ಜೆಯನ್ನಿಟ್ಟಿದ್ದು, ಜನಪ್ರಿಯ ಮೆಸೇಜಿಂಗ್ ಆ್ಯಪ್ ‘ವಾಟ್ಸ್ಆ್ಯಪ್’ ಮೂಲಕವೇ ಮುಂಗಡ ಬಸ್ ಟಿಕೆಟ್ ಕಾಯ್ದಿರಿಸುವ ನೂತನ ಸೌಲಭ್ಯವನ್ನು ಜಾರಿಗೆ ತಂದಿದೆ.
ನಿಗಮದ ‘ಅವತಾರ್ 4.0’ (AWATAR) ಸಾಫ್ಟ್ವೇರ್ನೊಂದಿಗೆ ಈ ವಾಟ್ಸ್ಆ್ಯಪ್ ವ್ಯವಸ್ಥೆಯನ್ನು ಸಂಯೋಜಿಸಲಾಗಿದ್ದು, ಪ್ರಯಾಣಿಕರು ಇನ್ಮುಂದೆ ಅತ್ಯಂತ ಸುಲಭವಾಗಿ ಮೊಬೈಲ್ ಮೂಲಕವೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಅಧಿಕೃತ ವಾಟ್ಸ್ಆ್ಯಪ್ ಸಂಖ್ಯೆ: +91 63649 40880

ಸಾರ್ವಜನಿಕರು ನಿಗಮದ ಅಧಿಕೃತ ಪರಿಶೀಲಿತ (Verified) ವಾಟ್ಸ್ಆ್ಯಪ್ ಬಿಸಿನೆಸ್ ಸಂಖ್ಯೆ +91 63649 40880 ಗೆ ಯಾವುದೇ ಸಂದೇಶವನ್ನು ಕಳುಹಿಸುವ ಮೂಲಕ ಸಂವಾದ ಆರಂಭಿಸಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭಿಸಬಹುದು.
ವಾಟ್ಸ್ಆ್ಯಪ್ನಲ್ಲಿ ಸಿಗುವ ಪ್ರಮುಖ ಸೇವೆಗಳು:
ಬಸ್ ಸೇವೆಗಳ ಹುಡುಕಾಟ ಮತ್ತು ಮಾರ್ಗಗಳ ಪರಿಶೀಲನೆ
ಪ್ರಯಾಣ ದರ ಹಾಗೂ ಆಸನಗಳ ಲಭ್ಯತೆಯ ಮಾಹಿತಿ
ಇಷ್ಟದ ಸೀಟ್ (ಆಸನ) ಆಯ್ಕೆ ಮಾಡುವ ಅವಕಾಶ
ಪ್ರಯಾಣಿಕರ ವಿವರಗಳ ದಾಖಲಾತಿ
ಯುಪಿಐ (UPI), ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಹಾಗೂ ವ್ಯಾಲೆಟ್ ಮೂಲಕ ಸುರಕ್ಷಿತ ಪಾವತಿ
ಹಣ ಪಾವತಿಯಾದ ತಕ್ಷಣ ವಾಟ್ಸ್ಆ್ಯಪ್ ಮತ್ತು ಇ-ಮೇಲ್ ಮೂಲಕವೇ ಅಧಿಕೃತ ಇ-ಟಿಕೆಟ್ (E-Ticket) ರವಾನೆ
ಅಗತ್ಯವಿದ್ದಲ್ಲಿ ಇದೇ ವಾಟ್ಸ್ಆ್ಯಪ್ ಮೂಲಕ ಟಿಕೆಟ್ ರದ್ದು (Cancellation) ಮಾಡುವ ಸೌಲಭ್ಯ

ಟಿಕೆಟ್ ಬುಕ್ ಮಾಡುವುದು ಹೇಗೆ?
+91 63649 40880 ಸಂಖ್ಯೆಗೆ ವಾಟ್ಸ್ಆ್ಯಪ್ನಲ್ಲಿ “Hi” ಅಥವಾ ಯಾವುದೇ ಸಂದೇಶ ಕಳುಹಿಸಿ.
ಬರುವ ಆಯ್ಕೆಗಳಲ್ಲಿ “Bus Ticket Booking” ಎಂಬುದನ್ನು ಆಯ್ಕೆ ಮಾಡಿ.
ಪ್ರಯಾಣ ಆರಂಭಿಸುವ ಸ್ಥಳ, ತಲುಪುವ ಊರು ಹಾಗೂ ದಿನಾಂಕವನ್ನು ನಮೂದಿಸಿ ಬಸ್ಗಳ ಪಟ್ಟಿ ಪರಿಶೀಲಿಸಿ.
ಸೂಕ್ತವಾದ ಬಸ್ ಸಮಯ ಮತ್ತು ಸೀಟನ್ನು ಆಯ್ಕೆ ಮಾಡಿಕೊಳ್ಳಿ.
ಪ್ರಯಾಣಿಕರ ವಿವರ ದಾಖಲಿಸಿ, ಯುಪಿಐ ಅಥವಾ ಕಾರ್ಡ್ ಮೂಲಕ ಆನ್ಲೈನ್ ಹಣ ಪಾವತಿಸಿ.
ಪಾವತಿ ಯಶಸ್ವಿಯಾದ ತಕ್ಷಣ ನಿಮ್ಮ ವಾಟ್ಸ್ಆ್ಯಪ್ಗೆ ಇ-ಟಿಕೆಟ್ ತಲುಪಲಿದೆ.
ಟಿಕೆಟ್ ರದ್ದುಗೊಳಿಸುವ ವಿಧಾನ:
ದು ವೇಳೆ ಪ್ರಯಾಣ ರದ್ದುಗೊಳಿಸಬೇಕಾದಲ್ಲಿ, ಅದೇ ಅಧಿಕೃತ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ “Bus Ticket Cancel” ಆಯ್ಕೆ ಮಾಡಬೇಕು. ನಂತರ ಪಿಎನ್ಆರ್ (PNR) ಸಂಖ್ಯೆ ಹಾಗೂ ಬುಕಿಂಗ್ ವೇಳೆ ಪಡೆದ ವಿವರಗಳನ್ನು ನಮೂದಿಸಿ ಟಿಕೆಟ್ ರದ್ದುಪಡಿಸಬಹುದು. ನಿಯಮಾನುಸಾರ ಕಡಿತದ ನಂತರ ಉಳಿದ ಹಣವು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಯಾಗಲಿದೆ (Refund).
ಪ್ರಯಾಣದ ವೇಳೆ ನಿರ್ವಾಹಕರಿಗೆ ವಾಟ್ಸ್ಆ್ಯಪ್ ಮೂಲಕ ಬಂದಿರುವ ಇ-ಟಿಕೆಟ್ ಮತ್ತು ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.















