ಚಿತ್ರದುರ್ಗ. ಸೆ.10: ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛ, ಶಾಲು ಅಥವಾ ಹಾರಗಳನ್ನು ನೀಡುವ ಬದಲಾಗಿ ನೋಟ್ಬುಕ್ ಮತ್ತು ಪೆನ್ಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಎಸ್. ರಮ್ಯ ಅವರು ಸಾರ್ವಜನಿಕರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಸೌಜನ್ಯದ ಭೇಟಿಯ ವೇಳೆ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೂಗುಚ್ಛ ನೀಡಿ ಗೌರವಿಸುವುದು ವಾಡಿಕೆಯಾಗಿದೆ. ಆದರೆ ಹೂಗುಚ್ಛಗಳು ಅಲ್ಪಕಾಲಿಕವಾಗಿದ್ದು, ಪುನರ್ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಕಲಿಕೆಗೆ ಉಡುಗೊರೆ’ ಎಂಬ ಸದುದ್ದೇಶದಿಂದ ಈ ಹೊಸ ತೀರ್ಮಾನ ಕೈಗೊಳ್ಳಲಾಗಿದೆ. ಹೂಗುಚ್ಛದ ಬದಲು ಸಂಗ್ರಹವಾಗುವ ನೋಟ್ಬುಕ್ ಹಾಗೂ ಬರವಣಿಗೆ ಉಪಕರಣಗಳನ್ನು ಸರ್ಕಾರಿ ಶಾಲೆಗಳ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಅಭಿಪ್ರಾಯಪಟ್ಟಿದ್ದಾರೆ.









