ಬೆಂಗಳೂರು : 2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು, ಬಡತನ ಮತ್ತು ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಅಪೌಷ್ಟಿಕತೆಯನ್ನು 5% ಕ್ಕಿಂತ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ‘ಮಹಾಸಂಕಲ್ಪ’ವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿರುವ ‘ದೃಢ ಕರ್ನಾಟಕದ ಸಂಕಲ್ಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ‘ನವಸಂಕಲ್ಪ’ದಡಿ ಆರೋಗ್ಯ, ಶಿಕ್ಷಣ ಹಾಗೂ ಮೇಕೆದಾಟು-ಎತ್ತಿನಹೊಳೆಯಂತಹ ಜಲ ಭದ್ರತಾ ಯೋಜನೆಗಳಿಗೆ ವೇಗ ನೀಡಲಾಗಿದೆ. ಮುಂಬರುವ 500 ದಿನಗಳಲ್ಲಿ ಮೂಲಸೌಕರ್ಯಕ್ಕಾಗಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ ₹3 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು
2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು, ಬಡತನ ಮತ್ತು ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಅಪೌಷ್ಟಿಕತೆಯನ್ನು 5% ಕ್ಕಿಂತ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ 'ಮಹಾಸಂಕಲ್ಪ'ವಾಗಿದೆ.
ಇದಕ್ಕಾಗಿ… pic.twitter.com/pOGgZ2bwTm
— DK Shivakumar (@DKShivakumar) September 10, 2026
ಜೊತೆಗೆ, 5 ಹೊಸ ಮಹಾನಗರಗಳ ನಿರ್ಮಾಣ, 1 ಲಕ್ಷ ಸರ್ಕಾರಿ ಹಾಗೂ 5 ಲಕ್ಷ ಖಾಸಗಿ ಉದ್ಯೋಗ ಸೃಷ್ಟಿ, ನಿರಾಶ್ರಿತರಿಗೆ 5 ಲಕ್ಷ ನಿವೇಶನ ಹಂಚಿಕೆ ಮತ್ತು ಬೆಂಗಳೂರಿನಲ್ಲಿ 5 ಹೊಸ ಲಾಲ್ಬಾಗ್ ಮಾದರಿಯ ಉದ್ಯಾನವನಗಳು ಹಾಗೂ 7 ಕೆರೆಗಳ ಪುನರುಜ್ಜೀವನಕ್ಕೆ ದೃಢ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಸಬಲ, ಸಾಮಾಜಿಕವಾಗಿ ಸಮಾನ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನಾಳಿನ ಭಾರತಕ್ಕೆ ಕರ್ನಾಟಕವನ್ನು ಮಾದರಿಯಾಗಿಸುವತ್ತ ಇದು ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.












