ಬೆಂಗಳೂರು.ಸೆಪ್ಟೆಂಬರ್.10 : ರಾಜ್ಯ ಸರ್ಕಾರವು 100 ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ಸಮಾವೇಶದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯನ್ನೊಳಗೊಂಡ ‘ಮಹಾಸಂಕಲ್ಪ’ ಮತ್ತು ‘ನವಸಂಕಲ್ಪ’ ಯೋಜನೆಗಳನ್ನು ಘೋಷಿಸಿದರು.
ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಸಂಪುಟದ ಸದಸ್ಯರು ಹಾಗೂ ರೈತರು, ವಿದ್ಯಾರ್ಥಿಗಳು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಜಂಟಿಯಾಗಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
2037ರ ಮಹಾಸಂಕಲ್ಪದ ಪ್ರಮುಖ ಗುರಿಗಳು
1 ಟ್ರಿಲಿಯನ್ ಡಾಲರ್ ಆರ್ಥಿಕತೆ: 2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಮೊತ್ತದ ಬೃಹತ್ ಆರ್ಥಿಕತೆಯನ್ನಾಗಿ ರೂಪಿಸುವುದು.
ಶೂನ್ಯ ಬಡತನ ಹಾಗೂ ಶಿಕ್ಷಣ ಸುಧಾರಣೆ: ರಾಜ್ಯದಲ್ಲಿ ಬಡತನ ರೇಖೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು.
ಅಪೌಷ್ಟಿಕತೆ ನಿಯಂತ್ರಣ: ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು ಶೇಕಡ 5ಕ್ಕಿಂತ ಕೆಳಗೆ ತರುವುದು.
ಮುಂದಿನ 500 ದಿನಗಳ ‘ನವಸಂಕಲ್ಪ’ ಯೋಜನೆಗಳು:
ಬಂಡವಾಳ ಹೂಡಿಕೆ: ಮುಂಬರುವ 500 ದಿನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ₹1.5 ಲಕ್ಷ ಕೋಟಿ ವಿನಿಯೋಗ ಹಾಗೂ ಒಟ್ಟಾರೆಯಾಗಿ ₹3 ಲಕ್ಷ ಕೋಟಿ ಮೊತ್ತದ ಹೊಸ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಗುರಿ.
ಉದ್ಯೋಗಾವಕಾಶ: ಸಾರ್ವಜನಿಕ ವಲಯದಲ್ಲಿ 1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಖಾಸಗಿ ಕ್ಷೇತ್ರದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ.
ನಗರಾಭಿವೃದ್ಧಿ ಮತ್ತು ವಸತಿ: ರಾಜ್ಯದಲ್ಲಿ 5 ಹೊಸ ಮಹಾನಗರಗಳ ನಿರ್ಮಾಣ ಹಾಗೂ ವಸತಿರಹಿತರಿಗೆ 5 ಲಕ್ಷ ನಿವೇಶನಗಳ ಹಂಚಿಕೆ.
ನೀರು ಮತ್ತು ಪರಿಸರ: ಮೇಕೆದಾಟು ಹಾಗೂ ಎತ್ತಿನಹೊಳೆ ಜಲ ಭದ್ರತಾ ಯೋಜನೆಗಳಿಗೆ ತ್ವರಿತ ವೇಗ ನೀಡುವುದು. ಬೆಂಗಳೂರಿನಲ್ಲಿ 5 ಹೊಸ ಲಾಲ್ಬಾಗ್ ಮಾದರಿಯ ಉದ್ಯಾನವನಗಳ ನಿರ್ಮಾಣ ಹಾಗೂ 7 ಪ್ರಮುಖ ಕೆರೆಗಳ ಸಮಗ್ರ ಪುನರುಜ್ಜೀವನ.
“ಆರ್ಥಿಕವಾಗಿ ಸಬಲ, ಸಾಮಾಜಿಕವಾಗಿ ಸಮಾನ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನವ ಭಾರತ ನಿರ್ಮಾಣಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುವುದೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯ,” ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ದೃಢ ಕರ್ನಾಟಕದ ಸಂಕಲ್ಪ
ಶತಕದ ಪಥ – ಪ್ರಗತಿಯ ರಥ100 ದಿನಗಳು.. ಇದು ಕೇವಲ ಆರಂಭವಷ್ಟೇ. ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಕಳೆದ 100 ದಿನಗಳಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಕೃಷಿ ಹಾಗೂ… pic.twitter.com/WoivjAvgwq
— DIPR Karnataka (@KarnatakaVarthe) September 10, 2026













