ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ಜಿಲ್ಲಾದ್ಯಂತ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನೆರವೇರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 1,783 ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 3ನೇ ದಿನದಂದು ಸುಮಾರು 927, 5ನೇ ದಿನದಂದು 453 ಗಣಪತಿ ಮೂರ್ತಿಗಳ ವಿಸರ್ಜನೆ ಮೆರವಣಿಗೆಗಳು ನಡೆಯಲಿವೆ ಎಂದು ತಿಳಿಸಿದರು.
ನಗರದ ಹಿಂದೂ ಮಹಾಗಣಪತಿ ಅತಿ ದೊಡ್ಡ ಹಾಗೂ ಅತಿ ಸೂಕ್ಷ್ಮ ಮೆರವಣಿಗೆಯಾಗಿದ್ದು, ಶೋಭಾಯಾತ್ರೆ ಅಕ್ಟೋಬರ್ 3 ರಂದು ನಿಗದಿಯಾಗಿದೆ. ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದು ರಾಜ್ಯದಲ್ಲೇ ಅತಿ ದೊಡ್ಡ ಹಾಗೂ ದೇಶದಲ್ಲೇ ಎರಡನೇ ಜನಸಂದಣಿಯ ಮೆರವಣಿಯಾಗಿದೆ. ಇದರ ಜೊತೆಗೆ ಜಿಲ್ಲೆಯ 6 ಕಡೆ ಹಿಂದು ಮಹಾಗಣಪತಿ ವಿಸರ್ಜನೆ ಮೆರವಣಿಗೆ ನಡೆಯಲಿದೆ. 5000 ಕ್ಕೂ ಹೆಚ್ಚು ಜನ ಸೇರುವ ಎಲ್ಲಾ ಮೆರವಣಿಗೆಗಳನ್ನೂ ಸೂಕ್ಷ್ಮ ಎಂದು ಪರಿಗಣಿಸಿ ಸೂಕ್ತ ಬಂದೋಬಸ್ತ್ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಶೋಭಾ ಯಾತ್ರ ನಗರದ ಮರುಘರಾಜೇಂದ್ರ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಮದಕರಿ ಹಾಗೂ ನೆಹರೂ ವೃತ್ತದಂತಹ ಪ್ರಮುಖ ಜಂಕ್ಷನ್‍ಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗುವುದು. ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಮಸೀದಿಗಳ ಮುಂಭಾಗ ಸೂಕ್ತ ಭದ್ರತಾ ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಗಣೇಶೋತ್ಸವ ಬಂದೋಬಸ್ತ್ ಕಾರ್ಯವು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕಾಗಿ ಜಿಲ್ಲೆಯ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಹಿಂದೂ ಮಹಾಗಣಪತಿ ಶೋಭಾಯಾತ್ರೆಯನ್ನು ವಿಪತ್ತು ನಿರ್ವಹಣೆ ಮಾದರಿಯಲ್ಲಿ ಕೈಗೊಳ್ಳಲು ಅನುಮತಿ ಕೋರಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಮಾರ್ಗಸೂಚಿಗಳ ಪಾಲನೆ ಕಡ್ಡಾಯ :
ಜನಸಂದಣಿ ಹಾಗೂ ಕಾಲ್ತುಳಿತ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ನೂತನ ಪ್ರಮಾಣಿತ ಕಾರ್ಯಾಚರಣೆ ವಿಧಾನ ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಗಣೇಶೋತ್ಸವ ಹಾಗೂ ಶೋಭಾಯಾತ್ರೆ ಆಯೋಜಕರು ಕಡ್ಡಾಯವಾಗಿ ಇವುಗಳನ್ನು ಪಾಲನೆ ಮಾಡಬೆಕು. ಸಂಬಂಧ ಪಟ್ಟ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.













