ಮುಂಬೈ.ಸೆಪ್ಟೆಂಬರ್.07: ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಖ್ಯಾತಿ ಪಡೆದಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಲವು (GSB Seva Mandal) ಈ ಬಾರಿಯ ಗಣೇಶೋತ್ಸವಕ್ಕಾಗಿ ₹703.27 ಕೋಟಿ ಮೌಲ್ಯದ ಭಾರಿ ಮೊತ್ತದ ವಿಮಾ ರಕ್ಷಣೆ ಪಡೆದುಕೊಂಡಿದೆ. ಕಳೆದ ವರ್ಷ ಈ ವಿಮಾ ಮೊತ್ತ ₹474 ಕೋಟಿಯಾಗಿತ್ತು.
ಸೆಪ್ಟೆಂಬರ್ 14ರಿಂದ ಆರಂಭವಾಗಲಿರುವ ಐದು ದಿನಗಳ ಈ ಮಹೋತ್ಸವದಲ್ಲಿ, ಗಣೇಶ ಮೂರ್ತಿಯನ್ನು ಬರೋಬ್ಬರಿ 66 ಕೆಜಿಗೂ ಹೆಚ್ಚು ಚಿನ್ನ ಹಾಗೂ 335 ಕೆಜಿ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗುವುದು ಎಂದು ಮಂಡಳಿಯ ವಕ್ತಾರ ಅಮಿತ್ ಪೈ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 12ಕ್ಕೆ ‘ವಿರಾಟ್ ದರ್ಶನ’
ಮೂರ್ತಿಯ ಮೊದಲ ದರ್ಶನವು ಸೆಪ್ಟೆಂಬರ್ 12ರ ರಾತ್ರಿ 8 ಗಂಟೆಗೆ ‘ವಿರಾಟ್ ದರ್ಶನ’ ಕಾರ್ಯಕ್ರಮದ ಮೂಲಕ ಭಕ್ತರಿಗೆ ಲಭ್ಯವಾಗಲಿದೆ. ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿ ನಡೆಯುವ ಈ ಉತ್ಸವದಲ್ಲಿ ಪ್ರತಿವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಗಣಪತಿಯ ಮೂರ್ತಿಯನ್ನು ಸಂಪೂರ್ಣ ಪರಿಸರಸ್ನೇಹಿಯಾಗಿ ಸಿದ್ಧಪಡಿಸಲಾಗಿದ್ದು, ಉತ್ಸವದ ಅವಧಿಯಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾನ ಸೇವೆ ನೆರವೇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದೇ ವೇಳೆ, ಗಣೇಶೋತ್ಸವದ ಮೆರವಣಿಗೆ ಮತ್ತು ಆಚರಣೆಗಳಲ್ಲಿ ಡಿಜೆ (DJ) ಸೌಂಡ್ ಸಿಸ್ಟಮ್ ಬಳಸದಂತೆ ಮಹಾರಾಷ್ಟ್ರದ ಆರೋಗ್ಯ ಖಾತೆ ರಾಜ್ಯ ಸಚಿವೆ ಮೇಘನಾ ಬೋರ್ಡಿಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂಜಯ್ ಶಿರ್ಸಾಟ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹಬ್ಬದ ಆಚರಣೆಗಳು ಇತರರಿಗೆ ತೊಂದರೆ ನೀಡಬಾರದು ಅಥವಾ ಜನರ ಆರೋಗ್ಯಕ್ಕೆ ಹಾನಿ ಉಂಟುಮಾಡಬಾರದು ಎಂದು ಹೇಳಿದ ಸಚಿವೆ ಮೇಘನಾ, “ಕಳೆದ ವರ್ಷ ಅತಿಯಾದ ಡಿಜೆ ಶಬ್ದದ ದುಷ್ಪರಿಣಾಮದಿಂದಾಗಿ ನನ್ನ ಸೋದರಸಂಬಂಧಿ ಸಾವನ್ನಪ್ಪಿದ್ದರು,” ಎಂದು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.











