Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜನರ ಮನೆ ಬಾಗಿಲಿಗೆ ಸರ್ಕಾರ: ಪ್ರಜಾಸೇವೆ ಆಂದೋಲನದ ಉದ್ದೇಶ : ಸಚಿವ ಕೃಷ್ಣ ಬೈರೇಗೌಡ

---Advertisement---

ಬೆಂಗಳೂರು .ಸೆಪ್ಟೆಂಬರ್ 06: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಅಭಿಯಾನ  ಜಿಲ್ಲೆಯ ಜನರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಆಡಳಿತವನ್ನು ನೇರವಾಗಿ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ಯೋಜನೆಯಾಗಿದ್ದು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರು ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಂದು ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಕನಸಿನ, ಹೊಸ ಕಲ್ಪನೆಯ ನೂತನ ಪ್ರಜಾ ಸೇವಾ ಇಲಾಖೆಯನ್ನೇ ಹುಟ್ಟುಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ವಿಶೇಷವಾಗಿ ಜನ ಸಾಮಾನ್ಯರು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಲು ಈ ಅಭಿಯಾನ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಬದಲು ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದು ಸುಸ್ತಾಗಿ ಕೊನೆಗೆ ಮಧ್ಯವರ್ತಿಗಳ ಕೈಗೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮಧ್ಯವರ್ತಿಗಳು ಅಧಿಕಾರಿಗಳ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಆವಳಿಯಿಂದ ಜನರು ಸಮಯ, ದುಡ್ಡು ಕಳೆದುಕೊಂಡು ಸರ್ಕಾರದ ಅಧಿಕಾರಿಗಳ ಬಗ್ಗೆ ಬೇಸತ್ತುಹೋಗುತ್ತಿದ್ದಾರೆ. ಅಂತಹ ಕೆಲವರಿಂದ ಹಲವರಿಗೆ ತೊಂದರೆಯಾಗ ಬಾರದು ಎಂದು ಏಜೆಂಟ್ ಗಳನ್ನು ಕಡಿವಾಣ ಹಾಕಲೇಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಪ್ರಜಾಸೇವೆ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳು ಪ್ರಜಾಸೇವೆ ಆಂದೋಲನ ನೂತನ ಇಲಾಖೆ ಪರಿಚಯಿಸಿದ್ದಾರೆ. ಈ ಕಾರ್ಯಕ್ರಮ ಪ್ರತಿ ಶನಿವಾರ ನಡೆಯಲಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಪ್ರತಿ ಮೊದಲನೇ  ಹಾಗೂ ಮೂರನೇ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಜಾ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಜಿಲ್ಲೆಯಲ್ಲಿಯೂ ಕೂಡ ಸಾರ್ವಜನಿಕರು ಮೊದಲನೇ ಹಾಗೂ ಮೂರನೇ ಶನಿವಾರ ಬೇರೆ ಬೇರೆ ನಿಗದಿತ ತಾಲೂಕು ಕೇಂದ್ರಗಳಲ್ಲಿ ತಮ್ಮ ಸಮಸ್ಯೆಗಳ ಕುರಿತ ಅರ್ಜಿ ಸಲ್ಲಿಸುವ  ಮೂಲಕ ನೋಂದಾಯಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದರಂತೆ ಇತರೆ ಶನಿವಾರಗಳಂದು ಹೋಬಳಿ ಮಟ್ಟದಲ್ಲಿ ಸಮಸ್ಯೆ ಗಳಿಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಅನಧಿಕೃತ ಲೇಔಟ್ ಗಳಿಂದಾಗಿ ಕೆರೆಗಳು ಮಾಯವಾಗಿವೆ. ಮೂವತ್ತು ವರ್ಷಗಳಿಂದ ಕಾನೂನು ಬಾಹಿರ ಲೇಔಟ್ ಗಳ ನಿರ್ಮಾಣವಾಗಿದ್ದು, ಡೆವಲಪರ್ ಗಳು ವಿದ್ಯುತ್, ನೀರು, ಒಳಚರಂಡಿ, ಉದ್ಯಾನಗಳನ್ನು ಸರ್ಕಾರ ನಿರ್ಮಿಸಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಈಗಾಗಲೇ ಸಮಸ್ಯೆ ಜಾಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಹೇಳಿದರು

ಅನಧಿಕೃತ ಬಡಾವಣೆ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೆ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಜಾಲವನ್ನು ಗುರುತಿಸುವ ಕಾರ್ಯ ಈಗಾಗಲೇ ಕೈಗೊಳ್ಳಲಾಗಿದೆ ಎಂದರು

ಬೆಂಗಳೂರಿನಲ್ಲಿ ಸುಮಾರು 1.11 ಲಕ್ಷ ಸಾವಿರ ಜನರು ಖಾತೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಕ್ರಯಪತ್ರ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದ ಪ್ರಕರಣಗಳಲ್ಲಿ ಖಾತೆ ನೀಡುವ ಮುನ್ನ ಪರಿಶೀಲನೆ ನಡೆಸಬೇಕಿರುವುದರಿಂದ ವಿಳಂಬವಾಗುತ್ತಿದೆ. ಗೋಮಾಳ ಜಾಗ ಒತ್ತುವರಿ ಮಾಡಿಕೊಂಡು ಅನಧಿಕೃತ ಬಡಾವಣೆ ಹಾಗೂ ಮನೆಗಳನ್ನು ನಿರ್ಮಿಸಿರುವ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಕಸದ ವಿಲೇವಾರಿ ಮತ್ತು ಮಳೆನೀರು ಹರಿದುಹೋಗುವ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಲಭ್ಯತೆಯನ್ನು ಪರಿಗಣಿಸಬೇಕಾಗಿದೆ ಎಂದು ತಿಳಿಸಿದರು.

.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ದೂರು ಹಾಗೂ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪ್ರಜಾಸೇವಾ ಇಲಾಖೆಗೆ ಒರ್ವ ಕಾರ್ಯದರ್ಶಿಯವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 235 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ಅದರಲ್ಲಿ ಬಹುತೇಕ ಅರ್ಜಿಗಳು ವಸತಿ ಹಾಗೂ ನಿವೇಶನ ಕೋರಿ ಬಂದಿದ್ದು ಉಳಿದಂತೆ ಬಿದರಹಳ್ಳಿಹೋಬಳಿಯಲ್ಲಿ ಪದವಿ ಪೂರ್ವ ಕಾಲೇಜು ಮಂಜೂರಾತಿಗಾಗಿ ಬಂದಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕಾಂತರಾಜು ಪಿ.ಎಸ್. ಮಾಹಿತಿ ನೀಡಿದರು.

ಮಳಿಗೆಗಳ ಉದ್ಘಾಟನೆ:

ಪ್ರಜಾಸೇವಾ ಆಂದೋಲನದಲ್ಲಿ ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸಮಾಜ ಕಲ್ಯಾಣ್ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ  ಮಾರಾಟ ಮಳಿಗೆ ಹಾಗೂ ವಸ್ತು ಪ್ರದರ್ಶನ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಸವಲತ್ತಗಳ ವಿತರಣೆ:

ಸಮಾರಂಭದಲ್ಲಿ ಫಲಾನುಭವಿಗಳಿಗೆ ಪಂಚಾಯತ್ ರಾಜ್ ಇಲಾಖೆವತಿಯಿಂದ ಹೊಲಿಗೆ ಯಂತ್ರ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಎಫ್ ಡಿ ಬಾಂಡ್ ಹಾಗೂ ಕಾನೂನು ಪದವೀಧರರಿಗೆ ಶಿಷ್ಯವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಋತ್ವಿಕ್ ರಂಜನ್ ಪಾಂಡೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯತೀಶ್ ಆರ್., ಮಾಜಿ ಸಚಿವರಾದ ನಾಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now